ದಿನೇಶ್ ಶಿರವಾಳ 
ನ್ಯೂಸ್

19ಕ್ಕೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ

ಶಿವಕುಮಾರ ಎಸ್.ಪಿ.

ಸಾಗರ: ಗ್ರಾಮೀಣ ಭಾಗದಲ್ಲಿ ಮೆಸ್ಕಾಂ ಲೈನ್‌ಮನ್‌ಗಳು ಜನರಿಗೆ ನೀಡುತ್ತಿರುವ ತೊಂದರೆ ಖಂಡಿಸಿ ಸೆ.19ರಂದು ಸಾಗರದ ಮೆಸ್ಕಾಂ ಕಚೇರಿ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮನವಿ ಮಾಡಿದರು.

ಬಿಲ್ ಕಟ್ಟಿಲ್ಲ ಎಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಈ ಬಗ್ಗೆ ಮೆಸ್ಕಾಂ ಇಂಜಿನಿಯರ್‌ಗಳನ್ನು ಪ್ರಶ್ನೆ ಮಾಡಿದರೆ ದಬ್ಬಾಳಿಕೆಯ ಉತ್ತರ ನೀಡುತ್ತಿದ್ದಾರೆ. ಸಾಕಷ್ಟು ಜನರು ಮೆಸ್ಕಾಂ ನೀತಿಯಿಂದ ಅಸಮಾಧಾನಗೊಂಡಿದ್ದಾರೆ. ಪ್ರತಿಭಟನೆಯೊಂದೆ ಮೆಸ್ಕಾಂ ದೌರ್ಜನ್ಯಕ್ಕೆ ಉತ್ತರ ಕಲಿಸುವ ಮಾರ್ಗ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವುದು ಮತ್ತು ಶರಾವತಿ ಪಂಪ್ಡ್ೃ ಸ್ಟೋರೇಜ್ ಯೋಜನೆಯನ್ನು ರೈತ ಸಂಘ ತೀವ್ರವಾಗಿ ವಿರೋಧಿಸುತ್ತದೆ. ನದಿ ನೀರು ಬೆಂಗಳೂರಿಗೆ ಒಯ್ಯುವ ಯೋಜನೆ ಬಗ್ಗೆ ಶಾಸಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಜಿಲ್ಲೆ, ತಾಲೂಕಿನ ಜನರು ನೀರು ಒಯ್ಯಲು ವಿರೋಧ ವ್ಯಕ್ತಪಡಿಸಿರುವುದನ್ನು ಶಾಸಕರು ಮನಗಾಣಬೇಕು. ಇದರ ಜತೆಗೆ ಶರಾವತಿ ಪಂಪ್ಡ್ೃ ಸ್ಟೋರೇಜ್ ಯೋಜನೆ ಹಣ ಹೊಡೆಯುವ ಯೋಜನೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ರೈತರು ತಮ್ಮ ಪಹಣಿಗೆ ಆಧಾರ್ ಲಿಂಕ್ ಮಾಡಿಕೊಳ್ಳುವ ಮೂಲಕ ಸರ್ಕಾರದ ಸೌಲಭ್ಯ ಪಡೆಯಲು ನಿಗಾವಹಿಸಬೇಕು. ಪಹಣಿಗೆ ಆಧಾರ್ ಲಿಂಕ್ ಮಾಡಿಸದಿದ್ದರೆ ದೆ ಹೋದಲ್ಲಿ ರೈತರು ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರೈತಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ಮಾತನಾಡಿ, ಸರ್ಕಾರ ಜನತಾದರ್ಶನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸುತ್ತಿದೆ. ಸ್ವತಃ ಮುಖ್ಯಮಂತ್ರಿಗಳು ಜನತಾದರ್ಶನ ನಡೆಸಿ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ರಾಜ್ಯದ ತಾಲೂಕು ಕೇಂದ್ರಗಳಲ್ಲೂ ಜನಸ್ಪಂದನಾ ನಡೆಸಲು 2023ರ ಸೆ.16ರಲ್ಲಿ ಸರ್ಕಾರ ಆದೇಶ ನೀಡಿದೆ. ಆದರೆ ಜಿಲ್ಲಾಧಿಕಾರಿಗಳು ಶಿವಮೊಗ್ಗ ಹೊರತುಪಡಿಸಿ ಬೇರೆ ತಾಲೂಕುಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸದೆ ಸರ್ಕಾರಿ ಸುತ್ತೋಲೆಯನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು.
ಡಾ.ರಾಮಚಂದ್ರ ಮನೆಘಟ್ಟ, ಕುಮಾರ ಗೌಡ, ಶಿವಕುಮಾರ್, ಹೇಮಂತ್ ಹೆಗಡೆ, ಚಂದ್ರಪ್ಪ, ವೆಂಕಟರಮಣ ಭಟ್, ಶಿವಣ್ಣ ಆಚಾರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.