ತಿ.ನರಸೀಪುರ: ತಾಲೂಕಿನ ಸುಜ್ಜಲೂರು ಗ್ರಾಮದಲ್ಲಿ ಚರಂಡಿಯಲ್ಲಿ ಜಿಡ್ಡುಗಟ್ಟಿ ನಿಲ್ಲುತ್ತಿರುವ ತ್ಯಾಜ್ಯ ನೀರಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಹಾಗೂ ಬೇವಿನಹಳ್ಳಿ ಗ್ರಾಮದಲ್ಲಿ ಹಕ್ಕುಪತ್ರ ಹೊಂದಿರುವ ನಿವೇಶನ ಫಲಾನುಭವಿಗಳಿಗೆ ಇ ಖಾತಾ ಮಾಡಿಕೊಡಲು ಇರುವ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ಎರಡೂ ಗ್ರಾಮಗಳ ನಿವಾಸಿಗಳು ದಸಂಸ ನೇತೃತ್ವದಲ್ಲಿ ಪಟ್ಟಣದ ತಾಲೂಕು ಕಚೇರಿ ಹಾಗೂ ತಾ.ಪಂ ಆವರಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ಗುರುವಾರ ಎರಡನೇ ದಿನವೂ ಮುಂದುವರೆದಿದೆ.
ಮತ ಹಾಕಿದ ಜನರ ಬವಣೆಯನ್ನು ನಿರ್ಲಕ್ಷಿಸುತ್ತಿರುವ ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಬೇಜವಾಬ್ದಾರಿ ನಡವಳಿಕೆಯ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಆಡಳಿತ ಸೌಧದ ರಸ್ತೆಯಲ್ಲಿ ಬುಧವಾರ ಪ್ರತಿಭಟನಾ ಧರಣಿ ಕುಳಿತಿದ್ದ ಸುಜ್ಜಲೂರು, ಬೆವಿನಹಳ್ಳಿ ಗ್ರಾಮಸ್ಥರು ಹಾಗೂ ದಸಂಸ ಪದಾಧಿಕಾರಿಗಳು ಪ್ರತಿಭಟನೆ ಮುಂದುವರಿಸಿ ತಹಸೀಲ್ದಾರ್ ಮತ್ತು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ, ಆಡಳಿತರೂಢ ಸರ್ಕಾರದ ಜನಪ್ರತಿನಿಧಿಗಳ ನಿರ್ಲಕ್ಷದ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು.
ಎರಡೂ ಗ್ರಾಮಗಳ ಸಮಸ್ಯೆ ಪರಿಹಾರವಾಗದಿದ್ದರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಾಲೂಕು ಕಚೇರಿ ಮುಂಭಾಗ ಹೊಟ್ಟೆಗಳನ್ನ ಬಡಿದುಕೊಂಡು, ಆಡಳಿತ ವರ್ಗಕ್ಕೆ ಧೂಳಿಟ್ಟು ಶಾಪ ಹಾಕುವ ಮೂಲಕ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯನ್ನ ಬೆಂಬಲಿಸಿ ದಸಂಸ ಹಿರಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಸಂ.ಸಂಚಾಲಕ ಶಂಭುಲಿಂಗಸ್ವಾಮಿ, ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಮುಖಂಡರಾದ ಬನ್ನಹಳ್ಳಿಹುಂಡಿ ಉಮೇಶ್, ಬಿಲಿಗೆರೆಹುಂಡಿ ಸಿದ್ದರಾಜು, ಶಾಂತಕುಮಾರ, ರವಿ, ಸುಜ್ಜಲೂರು ಬಸವರಾಜು, ಬಸವಯ್ಯ, ಮಹೇಶ್, ಕುಮಾರ್, ಸಿದ್ದೇಶ, ಶಿವಯ್ಯ, ಮಹದೇವ, ಬೇವಿನಹಳ್ಳಿ ಲತಾ, ಪದ್ಮ ಮಹದೇವಮ್ಮ, ನಂಜಯ್ಯ, ಮರಿನಂಜ, ದೊರೆಸ್ವಾಮಿ ಹಾಗೂ ಇತರರು ಇದ್ದರು.