ಮಳವಳ್ಳಿ: ತಾಲೂಕಿನ ನೆಲಮಾಕನಹಳ್ಳಿ, ಕಂದೇಗಾಲ ಸೇರಿದಂತೆ ವಿವಿಧ ನಾಲೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕೆಂದು ನಾಲಾ ಕೊನೆ ಭಾಗದ ಹಲವು ಗ್ರಾಮಗಳ ರೈತರು ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ತಾಲೂಕಿನ ಟಿ. ಕಾಗೇಪುರ ಬಳಿ ಇರುವ ಕಾವೇರಿ ನೀರಾವರಿ ನಿಗಮದ ಉಪ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಿಗಮದ ಕಚೇರಿ ಮುಂದೆ ಜಮಾವಣೆಗೊಂಡ ರೈತರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕೂಡಲೇ ಬೆಳೆಗಳಿಗೆ ನೀರು ಕೊಡಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ಡಾ.ಕೆ. ಅನ್ನದಾನಿ ಮಾತನಾಡಿ, ಕೆ.ಆರ್.ಎಸ್. ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುತ್ತಿದ್ದರೂ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಈಗಾಗಲೇ ಬೆಳೆದು ಕಟಾವಿನ ಹಂತದಲ್ಲಿರುವ ಕಬ್ಬು, ಭತ್ತ, ರಾಗಿ, ಜೋಳದ ಬೆಳೆಗಳು ಒಣಗುತ್ತಿದ್ದು, ಕೂಡಲೇ ಕೊನೆಯ ಭಾಗಕ್ಕೆ ನೀರು ಹರಿಸದಿದ್ದರೆ ರೈತರ ಜತೆಗೂಡಿ ಅನಿರ್ದಿಷ್ಟಾವದಿ ಹೋರಾಟ ಮಾಡಬೇಕಾಗುತ್ತದೆ ಎಂದು ದೂರವಾಣಿ ಮೂಲಕ ಕಾವೇರಿ ನೀರಾವರಿ ನಿಗಮದ ಮೇಲಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಈಗಿನಿಂದಲೇ ಏ.22 ರವರೆಗೂ ನಾಲೆಗಳಲ್ಲಿ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು. ಹಲವು ಗ್ರಾಮಗಳ ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.