ರಸಗೊಬ್ಬರಕ್ಕೆ ಸಹಾಯಧನ ನೀಡುವಂತೆ ಒತ್ತಾಯಿಸಿ ಕಲ್ಲೂರು ಮೇಘರಾಜ್, ಪ್ರೊ.ಕಲ್ಲನ, ಗೋಪಾಲಕೃಷ್ಣ, ಎಚ್.ಎಂ.ಸಂಗಯ್ಯ, ಎಂ.ವಿ.ರಾಜಮ್ಮ ಮುಂತಾದವರಿದ್ದರು. 
ನ್ಯೂಸ್

ರಸಗೊಬ್ಬರಕ್ಕೆ ಸಬ್ಸಿಡಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಶಿವಮೊಗ್ಗ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆ ಹೆಚ್ಚಳವಾಗಿದ್ದು, ಕೇಂದ್ರ ಸರ್ಕಾರ ರೈತರಿಗೆ ಸಹಾಯಧನ ನೀಡುವಂತೆ ರಾಜ್ಯ ಸರ್ಕಾರ ಒತ್ತಡ ಹೇರಬೇಕೆಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದ ಅಧ್ಯಯನ ಕೇಂದ್ರ ಟ್ರಸ್ಟ್‌ನ ಪದಾಧಿಕಾರಿಗಳು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಷ್ಯಾ ಸರಬರಾಜು ಮಾಡುತ್ತಿದ್ದ ರಸಗೊಬ್ಬರಗಳ ಬೆಲೆಯ ಮೇಲಿನ ರಿಯಾಯಿತಿಯನ್ನು ಹಿಂಪಡೆದಿರುವುದರಿಂದ ರಸಗೊಬ್ಬರ ಬೆಲೆ ಹೆಚ್ಚಾಗಿದೆ. ಭಾರತದಲ್ಲಿ ವ್ಯವಸಾಯವೇ ಮುಖ್ಯ ಕ್ಷೇತ್ರ. ರಸಗೊಬ್ಬರ ಏರಿಕೆಯಿಂದ ಸಹಜವಾಗಿಯೇ ರೈತರು ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಸಹಾಯಧನ ನೀಡಬೇಕೆಂದು ಒತ್ತಾಯಿಸಿದರು.
ಅದಾನಿ, ಅಂಬಾನಿ ಮುಂತಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಹಲವು ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಿಯಾಯಿತಿ ಘೋಷಿಸಿದೆ. ಆದರೆ ದೇಶದ ಬೆನ್ನೆಲುಬಾಗಿರುವ ರೈತರು ಬಳಸುವ ರಸಗೊಬ್ಬರಕ್ಕೆ ಸಬ್ಸಿಡಿ ನೀಡಲು ಯೋಚನೆ ಮಾಡುತ್ತಿರುವುದು ವಿಪರ್ಯಾಸ. ಈ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆಯಬೇಕೆಂದು ಆಗ್ರಹಿಸಿದರು.
ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಟ್ರಸ್ಟಿಗಳಾದ ಎಚ್.ಎಂ. ಸಂಗಯ್ಯ, ಪ್ರೊ.ಕಲ್ಲನ, ಎಂ.ವಿ. ರಾಜಮ್ಮ, ಕೆ.ಆರ್. ಶಿವಣ್ಣ, ಶಂಕ್ರಾನಾಯ್ಕ, ಮಂಜುನಾಥ, ಗೋಪಾಲಕೃಷ್ಣ, ಎಸ್.ಜಿ.ಸುರೇಶ್, ಎನ್.ನಾಗೇಶ ರಾವ್, ಬಿ.ಟಿ. ಮಂಜನಾಯ್ಕ ಮುಂತಾದವರು ಪ್ರತಿಭಟನೆಯಲ್ಲಿದ್ದರು.