ಶಿವಮೊಗ್ಗ : ರಾಜ್ಯದಲ್ಲಿನ ಪರಿಶಿಷ್ಟ ಜಾತಿಗಳಿಗೆ ಸಂಬಂಧಿದ ಮೀಸಲಾತಿಯಲ್ಲಿ ಕೂಡಲೇ ಒಳಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ಶುಕ್ರವಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಒಕ್ಕೂಟ ಜಿಲ್ಲಾ ಶಾಖೆ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಒಳಮೀಸಲಾತಿಗಾಗಿ ಕಳೆದ 40 ವರ್ಷಗಳಿಂದ ಅನೇಕ ಹೋರಾಟ ಮಾಡಿ ಸರ್ಕಾರಗಳ ಗಮನಸೆಳೆದರೂ ಪ್ರಯೋಜನವಾಗಿಲ್ಲ. ಒಳಮೀಸಲು ಜಾರಿ ಆಯಾ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿ ವರ್ಷ ಕಳೆದರೂ ಒಳ ಮೀಸಲು ಜಾರಿಗೆ ಸರ್ಕಾರ ವಿಳಂಬನೀತಿ ತೋರುತ್ತಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಸರ್ಕಾರ ಯಾವುದೇ ನೆಪಹೇಳದೆ ಕೂಡಲೇ ರಾಜ್ಯದಲ್ಲಿನ ಪರಿಶಿಷ್ಟರ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗೆ ಆದೇಶಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಗಳನ್ನು ನಡೆಸಲಾಗುವುದು ಎಂದು ಜಿಲ್ಲೆಯ ಮಾದಿಗ, ಸಮಗಾರ, ಮೋಚಿ, ಛಲವಾದಿ, ಅಲೆಮಾರಿ ಹಾಗೂ ಇತರೆ ಸಮಾಜಗಳ ಮುಖಂಡರು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಪ್ರಮುಖರಾದ ಅಣ್ಣಪ್ಪ, ಶಿವಲಿಂಗಪ್ಪ, ಸಿ.ಮೂರ್ತಿ, ಎ.ಕೆ.ಹನುಮಂತಪ್ಪ, ತೇಜೇಶ್, ಮಂಜಣ್ಣ ವಿದ್ಯಾನಗರ, ಪರಮೇಶ್ವರಪ್ಪ ಕುಂಸಿ, ರವಿ ಕೊನಗವಳ್ಳಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.