ಎಚ್.ಡಿ.ಕೋಟೆ ಶುಂಠಿ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಕೂಲಿ ನೀಡುವಂತೆ ಒತ್ತಾಯಿಸಿ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮಗ್ಗೆ ಸುಂದರ, ಕೆ.ನಾಗರಾಜು, ರಾಮಕೃಷ್ಣ, ಬೆಟ್ಟ ನಾಯಕ, ವೆಂಕಟೇಶ್, ಸೋಮೇಶ್, ಮರಸಿದ್ದಯ್ಯ, ರಾಜು ಇತರರಿದ್ದರು. 
ನ್ಯೂಸ್

ದುಡಿಮೆಗೆ ತಕ್ಕಂತೆ ಕೂಲಿ ನೀಡಲು ಒತ್ತಾಯಿಸಿ ಪ್ರತಿಭಟನೆ

ಎಂ.ರವಿ

ಎಚ್. ಡಿ.ಕೋಟೆ: ಶುಂಠಿ ಕಾರ್ಮಿಕರಿಗೆ ದುಡಿಮೆಗೆ ತಕ್ಕಂತೆ ಶುಂಠಿ ಖರೀದಿದಾರರು ಕೂಲಿ ನೀಡುತ್ತಿಲ್ಲ ಎಂದು ಆರೋಪಿಸಿ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ವತಿಯಿಂದ ಭಾನುವಾರ ತಾಲೂಕಿನ ಬೊಪ್ಪನಹಳ್ಳಿ ಗೇಟ್ ಬಳಿ ಇರುವ ಸಂಘದ ಆವರಣದ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಮಗ್ಗೆ ಸುಂದರ ಮಾತನಾಡಿ, ತಾಲೂಕಿನಲ್ಲಿ ಅತಿ ಹೆಚ್ಚಾಗಿ ಶುಂಠಿ ಬೆಳೆ ಬೆಳೆಯುತ್ತಿದ್ದು ಇದನ್ನು ಅವಲಂಬಿಸಿ ಸಾವಿರಾರು ಕೂಲಿ ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ. ಶುಂಠಿ ಖರೀದಿದಾರರು, ಶುಂಠಿ ಕೀಳುವ ಕೂಲಿ ಕಾರ್ಮಿಕರಿಗೆ ಕಡಿಮೆ ಕೂಲಿ ನೀಡುತ್ತಿರುವುದರಿಂದ ಕುಟುಂಬ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ. ಒಂದು ಮೂಟೆ ಶುಂಠಿ ಕೀಳಲು 150 ರೂ. ನಿಗದಿ ಮಾಡಲಾಗಿದ್ದು, 20 ಜನ ಕೂಲಿ ಕಾರ್ಮಿಕರು ಒಂದು ದಿನಕ್ಕೆ 70 ರಿಂದ 80 ಮೂಟೆ ಶುಂಠಿ ಕೀಳಬಹುದಾಗಿದೆ. ವಾಹನ ಇತರ ಖರ್ಚು ಕಳೆದು ಕೂಲಿ ಕಾರ್ಮಿಕರಿಗೆ ಕಡಿಮೆ ಕೂಲಿ ಸಿಗುತ್ತಿದೆ. ಇದರಿಂದ ಕೂಲಿಕಾರ್ಮಿಕರ ಜೀವನ ನಿರ್ವಹಣೆಗೆ ತೊಂದರೆ ಉಂಟಾಗಿದೆ ಎಂದು ತಿಳಿಸಿದರು.

ಶುಂಠಿ ಖರೀದಿದಾರರಿಗೆ ಕಳೆದ ಐದಾರು ತಿಂಗಳಿಂದ ಹೆಚ್ಚುವರಿ ದರ ನೀಡುವಂತೆ ಒತ್ತಾಯಿಸಿದ್ದರೂ ಖರೀದಿದಾರರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಹೆಚ್ಚಿನ ದರ ನೀಡುವವರೆಗೂ ಶುಂಠಿ ಕೆಲಸಕ್ಕೆ ಹೋಗುವುದಿಲ್ಲ. ಈಗ ನೀಡುತ್ತಿರುವ 150 ರೂ.ಗಳಿಂದ 200 ರೂ. ನೀಡಬೇಕು ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಶುಂಠಿ ಬೆಳೆಯುವ ರೈತರಿಗಾಗಲಿ ಶ್ರಮಜೀವಿ ಕೂಲಿ ಕಾರ್ಮಿಕರಿಗಿಂತ ಖರೀದಿದಾರಿಗೆ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಶುಂಠಿ ಖರೀದಿದಾರರು ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಗೌರವ ಅಧ್ಯಕ್ಷ ಕೆ.ನಾಗರಾಜು, ಉಪಾಧ್ಯ ರಾಮಕೃಷ್ಣ, ಬೆಟ್ಟ ನಾಯಕ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಸಹ ಕಾರ್ಯದರ್ಶಿ ಸೋಮೇಶ್, ಖಜಾಂಚಿ ಮರಸಿದ್ದಯ್ಯ, ಸದಸ್ಯರಾದ ರಾಜು, ಬೆಟ್ಟ ನಾಯಕ, ಮಾದೇವ ನಾಯಕ, ತೇಜುಕುಮಾರ್, ಚಿಕ್ಕಣ್ಣ, ದುಂಡುರಾಜ್ ಇದ್ದರು.