ಕೋಲ್ಕತದಲ್ಲಿ ನಡೆದಿದ್ದ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಕಲ್ಲೂರು ಮೇಘರಾಜ್, ಶಂಕ್ರಾನಾಯ್ಕಾ, ಡಾ.ಶೇಖರ್ ಗೌಳೇರ್, ಎಸ್.ಪಿ.ಶಿವಣ್ಣ ಮತ್ತಿತರರು ಪ್ರತಿಭಟನೆ ನಡೆಸಿದರು. 
ನ್ಯೂಸ್

ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಶಿವಮೊಗ್ಗ: ಕೋಲ್ಕತದಲ್ಲಿ ನಡೆದಿದ್ದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತಪ್ಪಿತಸ್ಥನಿಗೆ ನೀಡಿರುವ ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಮಾರ್ಪಡಿಸಬೇಕೆಂದು ಆಗ್ರಹಿಸಿ ಶಾಂತವೇರಿ ಗೋಪಾಲ ಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಪ್ರಮುಖರು ಕಪ್ಪು ಪಟ್ಟಿ ಧರಿಸಿ ಮಂಗಳವಾರ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಇಡೀ ದೇಶದ ಗಮನಸೆಳೆದಿದ್ದ ಪ್ರಕರಣದಲ್ಲಿ ಅಪರಾಧಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಮೃತ ಯುವತಿಯ ಮನೆಯವರು ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಪ್ರತಿಭಟನೆ ನಡೆಸಿರುವುದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಇರುವ ನಂಬಿಕೆಯನ್ನೇ ಬುಡಮೇಲು ಮಾಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ. ಆದರೆ ಈ ಪರಿಹಾರದ ಹಣವನ್ನು ಕುಟುಂಬಸ್ಥರು ನಿರಾಕರಿಸಿರುವುದು ಸ್ವಾಗತಾರ್ಹ ಮತ್ತು ಅದು ಆ ಕುಟುಂಬದ ಆತ್ಮಗೌರವದ ಸಂಕೇತವಾಗಿದೆ. 57 ದಿನಗಳಲ್ಲಿ ತೀರ್ಪು ಬಂದಿರುವುದು ವಿಶೇಷ. ಆದರೆ ಜೀವಾವಧಿ ಶಿಕ್ಷೆಗೆ ಸೀಮಿತಗೊಳಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಡಾ. ಶೇಖರ್ ಗೌಳೇರ್, ಎಸ್.ಪಿ.ಶಿವಣ್ಣ, ಶಂಕ್ರಾನಾಯ್ಕಾ ಪ್ರತಿಭಟನೆಯಲ್ಲಿದ್ದರು.