ನ್ಯೂಸ್

ಲಂಕೆಯಲ್ಲಿ ನಿಲ್ಲದ ಪ್ರತಿಭಟನೆ, ಅಧಿಕಾರ ಬಿಡದ ಗೋತಬಯ..

ಕೊಲಂಬೊ: ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಶ್ರೀಲಂಕಾದಲ್ಲಿ ಇತಿಹಾಸದಲ್ಲೇ ಕಂಡುಕೇಳರಿಯದ ರೀತಿಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು ಆಹಾರ, ಇಂಧನ ಮತ್ತು ಔಷಧಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಅಧ್ಯಕ್ಷ ಗೊತಬಯ ರಾಜಪಕ್ಸ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಆದರೂ ಅಧಿಕಾರ ಬಿಡುವುದಿಲ್ಲ ಎಂದು ಹಠಹಿಡಿದಿರುವ ಗೋತಬಯ, ಮೂರು ದಿನ ಹಿಂದೆ ಹೇರಿದ್ದ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮಂಗಳವಾರ ಮಧ್ಯರಾತ್ರಿ ಹಿಂಪಡೆದಿದ್ದಾರೆ. ಆಳುವ ಮೈತ್ರಿಕೂಟ ಅಲ್ಪಮತಕ್ಕೆ ಇಳಿದ ಬೆನ್ನಲ್ಲೇ ಅವರು ಈ ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ, ಹಸಿವಿನ ಹಾಹಾಕಾರ ತಾಂಡವ ವಾಡಬಹುದೆಂದು ಸಂಸತ್ತಿನ ಸ್ಪೀಕರ್ ಮಹಿಂದ ಯಾಪ ಅಭಯವರ್ಧನೆ ಎಚ್ಚರಿಕೆ ನೀಡಿದ್ದಾರೆ.

ಭಾರತಕ್ಕೆ ಕೃತಜ್ಞತೆ: ಆಹಾರ ಹಾಗೂ ಔಷಧ ಕೊರತೆಯಿಂದ ಬಳಲುತ್ತಿರುವ ದ್ವೀಪ ರಾಷ್ಟ್ರಕ್ಕೆ ಭಾರತ ಸಹಿತ ಹಲವು ಮಿತ್ರ ದೇಶಗಳು ನೆರವಾಗುತ್ತಿವೆ. ಭಾರತ ಸಾಕಷ್ಟು ಇಂಧನವನ್ನೂ ಪೂರೈಸಿದೆ. ಈ ನಡುವೆ, ಔಷಧಿಗಳನ್ನು ಸರಬರಾಜು ಮಾಡಿದ್ದಕ್ಕಾಗಿ ಶ್ರೀಲಂಕಾದ ರಾಷ್ಟ್ರೀಯ ಆಸ್ಪತ್ರೆ ಅಧಿಕಾರಿಗಳು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ 24 ತಾಸುಗಳಲ್ಲಿ 76 ಸಾವಿರ ಟನ್ ಇಂಧನವನ್ನು ಭಾರತ ಸರಬರಾಜು ಮಾಡಿದೆ. ‘ನಮಗೆ ಬಹುತೇಕ ಔಷಧಗಳು ಸಾಲ ಒಪ್ಪಂದದ ಆಧಾರದಲ್ಲಿ ಭಾರತದಿಂದ ಬರುತ್ತಿವೆ’ ಎಂದು ರಾಷ್ಟ್ರೀಯ ನೇತ್ರಾಲಯದ ನಿರ್ದೇಶಕ ದಮ್ಮಿಕಾ ಹೇಳಿದ್ದಾರೆ.

ಪ್ರತಿಭಟನೆಗಳ ಮಹಾಪೂರ: ಬಿಕ್ಕಟ್ಟಿಗೆ ಸದ್ಯೋಭವಿಷ್ಯದಲ್ಲಿ ಯಾವುದೇ ಪರಿಹಾರ ಸಿಗುವ ಲಕ್ಷಣಗಳು ಇಲ್ಲದಿರುವುದ ರಿಂದ ವಿವಿಧ ವಿಭಾಗಗಳ ಜನರು ಪ್ರತಿಭಟನೆಗಳನ್ನು ತೀವ್ರಗೊಳಿಸಿದ್ದಾರೆ. ಬ್ಯಾಂಕ್ ಆಫ್ ಸಿಲೋನ್​ನ ನೌಕರರ ಸಂಘ ಬುಧವಾರ ಪ್ರತಿಭಟನೆ ನಡೆಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಪುನರ್​ರಚನೆಗೆ ಕರೆ ನೀಡಿದೆ. ಕೊಲಂಬೋದಲ್ಲಿ ನೂರಾರು ಜನರು ಗೋತಾ ಗೋ ಹೋಮ್ ಎಂಬ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ್ದಾರೆ. ಸವಾರರು ತಮ್ಮ ವಾಹನಗಳ ಹಾರ್ನ್ ಮಾಡಿ ಹೋರಾಟಗಾರರಿಗೆ ಬೆಂಬಲ ಸೂಚಿಸುತ್ತಿದ್ದಾರೆ.

ವೈದ್ಯರ ಚಳವಳಿ: ದೇಶದಲ್ಲಿ ಔಷಧಗಳ ಕೊರತೆ ಯನ್ನು ಪ್ರತಿಭಟಿಸಿ ಶ್ರೀಲಂಕಾದ ವೈದ್ಯರು ಬೀದಿಗಿಳಿದು ಚಳವಳಿ ನಡೆಸುತ್ತಿದ್ದಾರೆ. ಔಷಧಗಳ ಕೊರತೆಯಿಂದ ಯಾವುದೇ ಕ್ಷಣದಲ್ಲಿ ದೇಶದ ಆರೋಗ್ಯ ವ್ಯವಸ್ಥೆ ಕುಸಿಯಬಹುದು ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕುಟುಂಬ ರಾಜಕಾರಣಕ್ಕೆ ಎಚ್ಚರಿಕೆ: ದಕ್ಷಿಣದ ಕರಾವಳಿಯಿಂದ ಹಿಡಿದು ತಮಿಳು ಪ್ರಾಬಲ್ಯದ ಉತ್ತರದ ನಗರಗಳ ವರೆಗೆ ಕಳೆದ ವಾರದಿಂದೀಚೆಗೆ ಗೋತಬಯ ಸರ್ಕಾರದ ವಿರುದ್ಧ ನೂರಕ್ಕೂ ಅಧಿಕ ಪ್ರತಿಭಟನೆಗಳು ಆಸ್ಪೋಟಗೊಂಡಿವೆ. ಇದು ರಾಜಪಕ್ಸ ಕುಟುಂಬ ರಾಜಕಾರಣದ ವಿರುದ್ಧ ಎಚ್ಚರಿಕೆ ಗಂಟೆ ಎಂದೇ ಭಾವಿಸಲಾಗಿದೆ. 2020ರಲ್ಲಿ ಚುನಾವಣೆಯಲ್ಲಿ ಗೆದ್ದು ಮಹಿಂದ ರಾಜಪಕ್ಸ ಶ್ರೀಲಂಕಾದ ಪ್ರಧಾನಿಯಾಗಿ ಸೋದರ ಹಾಗೂ ಅಧ್ಯಕ್ಷ ಗೋತಬಯ ರಾಜಪಕ್ಸರ ಅಧೀನದಲ್ಲಿ ಆಡಳಿತ ನಡೆಸಲು ಆಯ್ಕೆಯಾಗಿದ್ದರು. 2021ರಲ್ಲಿ ಗೋತಬಯರ ಇನ್ನೊಬ್ಬ ಸೋದರ ಬಾಸಿಲ್ ರಾಜಪಕ್ಸ ದೇಶದ ಹಣಕಾಸು ಮಂತ್ರಿಯಾಗಿ ನೇಮಕಗೊಂಡು ದ್ವೀಪ ರಾಷ್ಟ್ರದ ಮೇಲೆ ಕುಟುಂಬದ ಹಿಡಿತ ಇನ್ನಷ್ಟು ಬಿಗಿಯಾಗಿತ್ತು. ಅದಾದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ದೇಶದ ಪ್ರಮುಖ ರಾಜಕೀಯ ಕುಟುಂಬ ಸಮಸ್ಯೆಯ ಸುಳಿಗೆ ಸಿಲುಕಿದೆ.