ಶಿವಮೊಗ್ಗ: ನಿಗದಿತ ಸಮಯಕ್ಕೆ ಫಲಿತಾಂಶ ಪ್ರಕಟ ಮಾಡುತ್ತಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಕುವೆಂಪು ವಿವಿ ಆಡಳಿತ ಸಂಪೂರ್ಣ ಹಳಿತಪ್ಪಿದೆ. ಪದೇ ಪದೆ ವಿವಿ ವಿರುದ್ಧ ಅವ್ಯವಹಾರ, ಭ್ರಷ್ಟಾಚಾರ ಆರೋಪಗಳು ಕೇಳಿ ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಿ ವಿದ್ಯಾರ್ಥಿಸ್ನೇಹಿ ಆಡಳಿತ ನಡೆಸಬೇಕೆಂದು ಒತ್ತಾಯಿಸಿ ಎನ್‌ಎಸ್‌ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ವಿವಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು.
ವಿವಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು. ಉತ್ತಮ ಶಿಕ್ಷಣ ಒದಗಿಸುವಲ್ಲಿ ವಿವಿ ವಿಫಲವಾಗಿದೆ. ಕ್ಯಾಂಪಸ್‌ಗೆ ಸನಿಹದಲ್ಲೇ ಇರುವ ರಂಭಾಪುರಿ ಕಾಲೇಜಿನಲ್ಲಿ ಮೂಲ ಸೌಕರ್ಯಗಳಿಲ್ಲ. ಕೊಠಡಿಗಳ ಛಾವಣಿ ಸರಿಯಿಲ್ಲದ ಕಾರಣ ಮಳೆ ನೀರು ಸೋರುತ್ತಿದೆ. ಕಳೆದ ಎರಡು ವರ್ಷಗಳಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ಆಡಳಿತ ವರ್ಗ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕುವೆಂಪು ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲೂ ಬಿಸಿಎ ಪದವಿಗೆ ನಿಗದಿತ ಸರ್ಕಾರಿ ಸೀಟುಗಳಿದ್ದು ಅದಕ್ಕೆ ತಕ್ಕಂತೆ ಸರ್ಕಾರಿ ಕೋಟಾದಡಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಆದರೆ ರಂಭಾಪುರಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಸೀಟುಗಳಿದ್ದರೂ ಮನಬಂದಂತೆ ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರಂಭಾಪುರಿ ಕಾಲೇಜಿನಲ್ಲಿ ಯಾವುದೇ ರಾಷ್ಟ್ರೀಯ ಹಬ್ಬಗಳನ್ನು ಮತ್ತು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ವಿದ್ಯಾರ್ಥಿಗಳು ಈ ವಿಚಾರವಾಗಿ ಪ್ರಶ್ನಿಸಿದರೆ ವಿವಿಯಿಂದ ನಮಗೆ ಯಾವುದೇ ಸಹಕಾರ ದೊರೆಯುತ್ತಿಲ್ಲ ಎಂದು ಪ್ರಾಚಾರ್ಯರು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ವಿವಿ ವ್ಯಾಪ್ತಿಯ ಯಾವ ಕಾಲೇಜುಗಳಲ್ಲೂ ನಿಗದಿತ ಸಮಯಕ್ಕೆ ಫಲಿತಾಂಶ ಪ್ರಕಟವಾಗುತ್ತಿಲ್ಲ. ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ಬಾಕಿ ಉಳಿದಿರುವ ವಿಷಯಗಳ ಪರೀಕ್ಷೆಯನ್ನು 6ನೇ ಸೆಮಿಸ್ಟರ್‌ನಲ್ಲಿ ಬರೆದಿದ್ದಾರೆ. ಅದರ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಎಂಸಿಎ ಹಾಗೂ ಎಂಕಾಂ ಪ್ರವೇಶಕ್ಕೆ ಬಹಳ ತೊಂದರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕುವೆಂಪು ವಿವಿಯ ಕಾಲೇಜುಗಳಲ್ಲಿ ಮೂಲ ಸೌಕರ್ಯ ಸಮರ್ಪಕವಾಗಿಲ್ಲ. ಇನ್ನು 15 ದಿನದೊಳಗೆ ಸಮಸ್ಯೆಗಳೆಲ್ಲವನ್ನೂ ಪರಿಹರಿಸಬೇಕಿದ್ದರೆ ಎನ್‌ಎಸ್‌ಐಯುನಿಂದ ಕುವೆಂಪು ವಿವಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಎನ್‌ಎಸ್‌ಯುಐ ಕುವೆಂಪು ವಿವಿ ಘಟಕದ ಅಧ್ಯಕ್ಷ ಮುರುಗೇಶ್, ಜಿಲ್ಲಾ ಕಾರ್ಯಾಧ್ಯಕ್ಷ ರವಿ ಕಾಟಿಕೆರೆ, ಶಿವಮೊಗ್ಗ ನಗರ ಘಟಕದ ಅಧ್ಯಕ್ಷ ರವಿ, ಚಂದ್ರೋಜಿರಾವ್, ವರುಣ್ ವಿ.ಪಂಡಿತ್, ಸುಭಾನ್, ಫರ್ಹಾದ್, ಆದಿತ್ಯ, ಶ್ರೀಕಾಂತ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.