ಬೆಂಗಳೂರು: ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಸೂಟ್‌ಕೇಸ್ ಪ್ರದರ್ಶಿಸಿ, ಅದಾನಿ, ಅಂಬಾನಿ ಭಾವಚಿತ್ರ ಹಿಡಿದು ಧಿಕ್ಕಾರದ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟಿಸಿದರು.
ಕಳೆದ ಐದು ವರ್ಷಗಳಿಂದ ಅದಾನಿ, ಅಂಬಾನಿ ಹೆಸರು ಪ್ರಸ್ತಾಪಿಸಿ ಪ್ರಶ್ನೆ ಮಾಡುತ್ತಿದ್ದ ಶೇಹಜಾದಾ(ರಾಹುಲ್ ಗಾಂಧಿ) ಇದೀಗ ಪ್ರಶ್ನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಹಣ ತುಂಬಿದ ಟೆಂಪೋ ಕಾಂಗ್ರೆಸ್ ಮನೆಗೆ ತಲುಪಿದೆಯೇ ಎಂದು ಮೋದಿ ಚುನಾವಣೆ ಪ್ರಚಾರ ಸಭೆಯಲ್ಲಿ ಝಾಡಿಸಿದ್ದರು.
ಇದರಿಂದ ಕೆರಳಿದ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತಲ್ಲದೇ, ಶುಕ್ರವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ರೀತಿಯಲ್ಲಿ ಪ್ರತಿಭಟನೆಯನ್ನೂ ನಡೆಸಿದರು.
ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್, ಚುನಾವಣೆಯಲ್ಲಿ ಮೋದಿಗೆ ಭಯ ಶುರುವಾಗಿದೆ. ಹೀಗಾಗಿಯೇ ಅದಾನಿ, ಅಂಬಾನಿ ಕಾಂಗ್ರೆಸ್‌ಗೆ ದುಡ್ಡು ಕೊಡುತ್ತಾರೆ ಅನ್ನುತ್ತಾರೆ. ಅದಾನಿ, ಅಂಬಾನಿಯಿಂದ ಅವರು ಪಡೆದಿರೋದು. ಭಯ ಪಟ್ಟು ಮೋದಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಹೀಗಾಗಿ ನಾವು ದುಡ್ಡಿನ ಮೂಲಕ ಪ್ರತಿಭಟನೆ ಮಾಡಿದ್ದೇವೆ ಎಂದರು.
ಮೊದಲು ಅದಾನಿ, ಅಂಬಾನಿ ಮೇಲೆ ರೈಡ್ ಮಾಡಿಸಲಿ, ಸುಮ್ಮನೆ ಕಾಂಗ್ರೆಸ್ ಮೇಲೆ ಆರೋಪ ಮಾಡುವುದಲ್ಲ, ಬಡವರನ್ನು ಲೂಟಿ ಮಾಡಿದವರು ಅದಾನಿ, ಅಂಬಾನಿ ಎಂದು ಟೀಕಿಸಿದರು.