ಕೆ.ಆರ್.ಪೇಟೆ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ್ದ ದೃಶ್ಯವನ್ನು ಕಿಡಿಗೇಡಿಗಳು ಡ್ರೋನ್ ಬಳಸಿ ಸೆರೆ ಹಿಡಿದಿರುವುದಾಗಿ ಆರೋಪಿಸಿ ಕಾಮಗಾರಿ ಸ್ಥಳದಲ್ಲಿ ಮಹಿಳಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕಮಂದಗೆರೆ ಗ್ರಾಮದ ಅಮಾನಿಕೆರೆ ಹೂಳೆತ್ತುವ ಕಾಮಗಾರಿಯನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿಯಲ್ಲಿ ಶ್ರವಣಹಳ್ಳಿ, ಚಿಕ್ಕಮಂದಗೆರೆ, ಹೊನ್ನೇನಹಳ್ಳಿಯ ಸುಮಾರು 120 ಕೂಲಿ ಕಾರ್ಮಿಕರು ತೊಡಗಿದ್ದರು. ಇದರಲ್ಲಿ 100 ಸಂಖ್ಯೆಯಷ್ಟು ಮಹಿಳಾ ಕೂಲಿ ಕಾರ್ಮಿಕರೇ ಇದ್ದರು.
ಕಾಮಗಾರಿ ವೇಳೆ ಮಹಿಳಾ ಕೂಲಿ ಕಾರ್ಮಿಕರು ಶೌಚಕ್ಕೆ ತೆರಳಿದ ಸಮಯದಲ್ಲಿ ವಿಕೃತ ಮನಸ್ಸಿನ ಕಿಡಿಗೇಡಿಗಳು ಕೆರೆಯ ಏರಿ ಮೇಲೆ ನಿಂತು ಡ್ರೋನ್ ಬಳಸಿ ಚಿತ್ರೀಕರಣ ಮಾಡಿದ್ದಾರೆ ಎಂದು ಕೂಲಿಕಾರ ಮಹಿಳೆಯರು ಆರೋಪಿಸಿದ್ದಾರೆ.
ಶೌಚಕ್ಕೆ ತೆರಳಿದ್ದ ವೇಳೆ ಡ್ರೋನ್ ಹಾರಾಡುತ್ತಿರುವುದನ್ನು ಕಂಡ ಮಹಿಳಾ ಕೂಲಿ ಕಾರ್ಮಿಕರು ಎಚ್ಚೆತ್ತುಕೊಂಡು ಯಾರು ಎಂದು ಕೂಗಿಕೊಂಡು ಬರುವಷ್ಟರಲ್ಲಿ ಕಿಡಿಗೇಡಿಗಳು ಕಾರು, ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ.
ಸ್ಥಳದಲ್ಲೇ ನೂರಾರು ಕೂಲಿಕಾರ ಮಹಿಳೆಯರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮಂದಗೆರೆ ಗ್ರಾಪಂ ಪಿಡಿಒ ಸುವರ್ಣ ಭೇಟಿ ನೀಡಿ ನೊಂದ ಮಹಿಳೆಯರಿಂದ ಮಾಹಿತಿ ಪಡೆದುಕೊಂಡರು. ನಂತರ ಮೇಲಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.