ಕಾಡಾನೆಗಳ ಉಪಟಳ ತಡೆಯುವಂತೆ ಒತ್ತಾಯಿಸಿ ಡಿಸಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿದರು. ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಕಸೆಟ್ಟಿ ರುದ್ರೇಶ್, ಇ.ಬಿ.ಜಗದೀಶ್, ಪಂಚಾಕ್ಷರಪ್ಪ, ಜ್ಞಾನೇಶ್, ಎಂ.ಡಿ.ನಾಗರಾಜ್, ಜಿ.ಎಂ.ವೀರಭದ್ರಪ್ಪ, ಪ್ರದೀಪ್, ಎಂ.ಡಿ.ರವಿಕುಮಾರ್ ಇತರರಿದ್ದರು. 
ನ್ಯೂಸ್

ಆನೆ ಉಪಟಳಕ್ಕೆ ಕಡಿವಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಶಿವಮೊಗ್ಗ: ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ತಪ್ಪಿಸಬೇಕು. ಬೆಳೆ ಮತ್ತು ಪ್ರಾಣ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ವಿವಿಧ ಗ್ರಾಮಸ್ಥರು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಅಶೋಕ ವೃತ್ತದಿಂದ ಬಿ.ಎಚ್.ರಸ್ತೆ, ನೆಹರು ರಸ್ತೆ, ಟಿ.ಸೀನಪ್ಪ ಶೆಟ್ಟಿ ವೃತ್ತ, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಪದೇಪದೆ ಕಾಡಾನೆಗಳು ದಾಳಿ ಮಾಡಿ ಬೆಳೆ ನಾಶ ಮಾಡುತ್ತಿವೆ. ಕಳೆದ ವರ್ಷ ಬರಗಾಲ, ಈ ಬಾರಿ ಅತಿವೃಷ್ಟಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಕಾಡಾನೆಗಳು ಬೆಳೆಗಳನ್ನು ನಾಶ ಮಾಡುವ ಮೂಲಕ ಕೈಗೆ ಬಂದಿರುವ ತುತ್ತು ಬಾಯಿಗೆ ಬಾರದಂತೆ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಆನೆ ಉಪಟಳ ಆರಂಭವಾಗಿ ವರ್ಷವಾಯಿತು. ಎರಡು ಜೀವ ಹಾನಿಯಾಗಿದ್ದರೂ ಅರಣ್ಯ ಇಲಾಖೆ ಗಂಭಿರವಾಗಿ ಪರಿಗಣಿಸಿಲ್ಲ. ಜನ ನೆಮ್ಮದಿ ಕಳೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ. ನಾವು ಯಾರನ್ನೂ ದೂರುವುದಿಲ್ಲ. ಶರಾವತಿ ಸಂತ್ರಸ್ತರೇ ಹೆಚ್ಚಿರುವ ಈ ಪ್ರದೇಶದಲ್ಲಿ ರೈತರ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಜಿಲ್ಲಾಧಿಕಾರಿಗಳು, ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಶರಾವತಿ ಸಂತ್ರಸ್ತರ ಪರ ಹೋರಾಟಗಾರ ಹೆಬ್ಬೂರು ನಾಗರಾಜ್ ಮಾತನಾಡಿ, ಪುರದಾಳು, ಸಿರಿಗೆರೆ, ಬೆಳ್ಳೂರು, ಅಗಸವಳ್ಳಿ ಹಾಗೂ ತಮ್ಮಡಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಲಾಖೆ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟಬೇಕು. ಜೀವಹಾನಿ ಮತ್ತು ಬೆಳೆಹಾನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಪ್ರಮುಖರಾದ ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಕಸೆಟ್ಟಿ ರುದ್ರೇಶ್, ಇ.ಬಿ.ಜಗದೀಶ್, ಪಂಚಾಕ್ಷರಪ್ಪ, ಜ್ಞಾನೇಶ್, ಪ್ರಮುಖರಾದ ಎಂ.ಡಿ.ನಾಗರಾಜ್, ಜಿ.ಎಂ.ವೀರಭದ್ರಪ್ಪ, ಹೆಬ್ಬೂರು ಪ್ರದೀಪ್, ಎಂ.ಡಿ.ರವಿಕುಮಾರ್, ಚಂದ್ರಕಾಂತ್, ಕೆ.ಎನ್.ನಾಗರಾಜ್, ವಿನಾಯಕಮೂರ್ತಿ, ಕೀರ್ತಿಸಾಗರ್, ಕೃಷ್ಣಪ್ಪ, ಜಗದೀಶ್, ಮಂಜುನಾಥ್, ಜಿ.ಡಿ.ನಾಗರಾಜ್, ಪ್ರಭಾಕರ್, ಶಿವಣ್ಣ, ರಾಮಚಂದ್ರ, ಮಂಜುನಾಥ್, ಅವಿನಾಶ್ ಇತರರಿದ್ದರು.

ಕಾಡಂಚಿನ ಗ್ರಾಮಗಳಿಗೆ ನಿತ್ಯವೂ ದಾಳಿ ಮಾಡುವ ಆನೆಗಳು ಅಡಕೆ, ತೆಂಗು, ಬಾಳೆ, ಭತ್ತ, ಮೆಕ್ಕೆಜೋಳ ಹಾಗೂ ಕಬ್ಬನ್ನು ಧ್ವಂಸ ಮಾಡುತ್ತಿವೆ. ಪುರದಾಳು ಪಂಚಾಯಿತಿ ವ್ಯಾಪ್ತಿಯ ಆಲದೇವರ ಹೊಸೂರಲ್ಲಿ ಹನುಮಂತಪ್ಪ ಎಂಬ ರೈತ ಆನೆ ತುಳಿತದಿಂದ ಸಾವಿಗೀಡಾಗಿದ್ದಾನೆ. ಆನೆಗಳ ಹಿಂಡೇ ಈ ಪ್ರದೇಶದಲ್ಲಿದ್ದು, ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.- ಎಚ್.ಆರ್.ಬಸವರಾಜಪ್ಪ, ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ