ಶ್ರೀರಂಗಪಟ್ಟಣ ತಾಲೂಕು ಕಚೇರಿ ಮುಂಭಾಗದಲ್ಲಿ ಶುಕ್ರವಾರ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  
ನ್ಯೂಸ್

ವಿಹಿಂಪ-ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ

ಮಾದೇಶ್ ತಿ.ನರಸೀಪುರ

ಶ್ರೀರಂಗಪಟ್ಟಣ: ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಗೋರಕ್ಷಾ ಪ್ರಮುಖ್ ಬೆಳಗೊಳ ಸುನೀಲ್ ಮಾತನಾಡಿ, ನೆರೆಯ ಬಾಂಗ್ಲಾದೇಶದಲ್ಲಿ ಧಾರ್ಮಿಕ ಸಂಘರ್ಷಕ್ಕೆ ಸಿಲುಕಿ ದೌರ್ಜನ್ಯಕ್ಕೆ ತುತ್ತಾಗಿರುವ ಅಲ್ಪಸಂಖ್ಯಾತ ಹಿಂದುಗಳ ರಕ್ಷಣೆಗೆ ತಕ್ಷಣ ಭಾರತ ಸರ್ಕಾರ ಧಾವಿಸಬೇಕು. ಭಾರತದ ಎಲ್ಲ ಹಿಂದುಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಧಾರ್ಮಿಕ ಸಾಮರಸ್ಯ ಹಾಗೂ ಕೋಮುಸೌರ್ಹದತೆ ಬಗ್ಗೆ ಉದ್ದುದ್ದ ಭಾಷಣ ಮಾಡುವವರು ನೆರೆಯ ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹತ್ಯೆ, ಅತ್ಯಾಚಾರದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಅಲ್ಲಿನ ಹಿಂದುಗಳು ಮೇಲಿನ ದೌರ್ಜನ್ಯ ಹಾಗೂ ಹಿಂದು ದೇಗುಲಗಳ ಮೇಲಿನ ದಾಳಿ ಪ್ರಶ್ನಿಸಿದ ಇಸ್ಕಾನ್‌ನ ಸಂತ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಬಾಂಗ್ಲಾ ಸರ್ಕಾರ ಬಂಧಿಸಿ ಅಕ್ರಮವಾಗಿ ಜೈಲಿನಲ್ಲಿರಿಸಿದೆ ಎಂದು ಆರೋಪಿಸಿದರು.

ಈ ಬಗ್ಗೆ ಅಲ್ಲಿನ ಜನರು ಸಾಕಷ್ಟು ಪ್ರತಿಭಟನೆ ನಡೆಸಿದರೂ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುವುದು ತೀರಾ ಆತಂಕಕಾರಿಯಾಗಿದೆ. ಈಗಲಾದರೂ ಭಾರತೀಯ ಹಿಂದುಗಳು ಒಗ್ಗಟ್ಟಿನಿಂದ ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿ ಕಾನೂನಿನ ನೆರವು ಮೂಲಕ ಅಲ್ಲಿನ ಹಿಂದುಗಳಿಗೆ ರಕ್ಷಣೆ ನೀಡುವ ಜತೆಗೆ ಸಂತ ಚಿನ್ಮೋಯ್ ದಾಸ್ ಬಿಡುಗಡೆಗೆ ಮುಂದಾಗುವಂತೆ ಒತ್ತಾಯಿಸಬೇಕಿದೆ ಎಂದು ಹೇಳಿದರು.

ಪುರಸಭಾ ಸದಸ್ಯ ಎಸ್.ಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಾಜದಲ್ಲಿ ಭಯ ಸೃಷ್ಟಿಸಲು ನಡೆಸುತ್ತಿರುವ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಬೆಳಗೊಳ ಸುರೇಶ್ ಮಾತನಾಡಿ, ರಾಜಕೀಯವಾಗಿ ಕಾಂಗ್ರೆಸ್‌ನಲ್ಲಿದ್ದರೂ ನಾವು ಹಿಂದುಗಳೇ ಆಗಿದ್ದು, ಹಿಂದುಗಳ ಮೇಲಿನ ದೌರ್ಜನ್ಯ ದಬ್ಬಾಳಿಕೆ ಕಂಡಾಗ ವಿರೋಧಿಸಿ ಹೋರಾಟ ನಡೆಸುವುದು ನಮ್ಮ ಹಕ್ಕು ಹಾಗೂ ಕರ್ತವ್ಯ ಎಂದು ತಿಳಿಸಿದರು. ಬಳಿಕ ಗ್ರೇಡ್-2 ತಹಸೀಲ್ದಾರ್ ಚೈತ್ರಾ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.

ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಚಂದನ್, ಬಜರಂಗದಳದ ವಿಭಾಗ ಕಾರ್ಯದರ್ಶಿ ಆನಂದೂರು ಬಸವರಾಜು, ಬಜರಂಗದಳ ತಾಲೂಕು ಸಂಚಾಲಕ ಶಂಕರ್, ತಾಲೂಕು ಗೋರಕ್ಷಕ ಪ್ರಮುಖ್ ಮಹೇಶ್, ತಾಲೂಕು ಕಾರ್ಯದರ್ಶಿ ವಿನಯ್, ರಾಮಚಂದ್ರ ದೀಕ್ಷಿತ್ ವಕೀಲರಾದ ರವೀಶ್, ಬಾಲರಾಜು, ಹೇಮಂತ್, ಸುಧಾಕರ್, ಪ್ರೇಮ್ ಕುಲಾಲ್ ಇತರರು ಇದ್ದರು.