ನಂಜನಗೂಡು: ನಗರದ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಕಾರ್ಖಾನೆ ಆಡಳಿತ ಮಂಡಳಿ ಸೂಕ್ತ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಾರ್ಖಾನೆ ಮುಂದೆ ಕುಟುಂಬಸ್ಥರು ಬುಧವಾರ ಶವ ಇರಿಸಿ ಪ್ರತಿಭಟನೆ ನಡೆಸಿದರು.
ನಗರದ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ದೇವೀರಮ್ಮನಹಳ್ಳಿಹುಂಡಿ ಗ್ರಾಮದ ಶಿವಶಂಕರ್ (48) ಕಳೆದ 25 ವರ್ಷಗಳಿಂದ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಕಳೆದ ಶುಕ್ರವಾರ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಕ್ತ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದರು. ಆ ಸಂದರ್ಭದಲ್ಲಿ ಯಾವುದೇ ತುರ್ತು ಚಿಕಿತ್ಸೆಯನ್ನು ಕಾರ್ಖಾನೆ ಆಡಳಿತ ಮಂಡಳಿ ನೀಡದೆ ಸಂಬಂಧಿಕರು ಬಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಕಾರ್ಖಾನೆ ಆಡಳಿತ ಮಂಡಳಿಯವರು ಮೃತನ ಕುಟುಂಬದವರಿಗೆ 20 ಲಕ್ಷ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬರಿಗೆ ಕಾರ್ಖಾನೆಯಲ್ಲಿ ಕೆಲಸ ಕೊಡಬೇಕು ಎಂದು ಕೇಳಿದಾಗ, ಕಾರ್ಖಾನೆ ಆಡಳಿತ ಮಂಡಳಿ ನಿರಾಕರಿಸಿದೆ ಎನ್ನಲಾಗಿದೆ. ಇದರಿಂದ ಕುಪಿತರಾದ ಕುಟುಂಬದವರು ಗ್ರಾಮಸ್ಥರೊಂದಿಗೆ ಸೇರಿ ಕಾರ್ಖಾನೆ ಮುಂದೆ ಜಮಾವಣೆಗೊಂಡು ಸೂಕ್ತ ಪರಿಹಾರ ನೀಡುವವರೆಗೆ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಕಾರ್ಖಾನೆ ಗೇಟ್ ಮುಂಭಾಗ ಶವ ಇಟ್ಟು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದ್ದು. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಸ್ಥಳಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿ ಅಂಬಿಕಾ ಹಾಗೂ ಪಟ್ಟಣ ಪೊಲೀಸರು ಭೇಟಿ ನೀಡಿ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಮಾತುಕತೆಗೆ ಮುಂದಾಗಿದ್ದು, ಗ್ರಾಮಸ್ಥರು ಪ್ರತಿಭಟನೆ ಮುಂದುವರಿಸಿದ್ದಾರೆ.