ನಂಜನಗೂಡು ನ್ಯಾಯಾಲಯದ ವಕೀಲರು ಸೋಮವಾರ ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ದೌರ್ಜನ್ಯ ನಡೆಸಿರುವ ಪೊಲೀಸರ ಮೇಲೆ ಕ್ರಮಕ್ಕೆ ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. 
ನ್ಯೂಸ್

ಹಲ್ಲೆ ಖಂಡಿಸಿ ನಂಜನಗೂಡು ವಕೀಲರಿಂದ ಪ್ರತಿಭಟನೆ

ನಂಜನಗೂಡು: ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ದೌರ್ಜನ್ಯ ನಡೆಸಿರುವ ಪೊಲೀಸರ ಕ್ರಮ ಖಂಡಿಸಿ ನಂಜನಗೂಡು ನ್ಯಾಯಾಲಯದ ವಕೀಲರು ಸೋಮವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ತಾಲೂಕು ಕಚೇರಿಗೆ ತೆರಳಿದ ವಕೀಲರು ನ್ಯಾಯಕ್ಕಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ವಕೀಲರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಕಾನೂನನ್ನು ರಕ್ಷಿಸಬೇಕಾದವರೇ ಈ ರೀತಿ ನಡೆದುಕೊಂಡಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಪೊಲೀಸರು ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಸರ್ಕಾರ ಚಿಕ್ಕಮಗಳೂರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಕೀಲರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಉಪ ತಹಸೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕಾಪ್ರಸಾದ್, ಉಪಾಧ್ಯಕ್ಷ ಸೋಹನ್‌ಕುಮಾರ್, ಸುನೀಲ್‌ಕುಮಾರ್, ಮಹೇಶ್ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.