ನ್ಯೂಸ್

ಲಾರಿ ಮಾಲೀಕರು, ಚಾಲಕರ ಸಂಘದಿಂದ ಪ್ರತಿಭಟನೆ

ರಾಜಣ್ಣ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಹಿಟ್ ಆ್ಯಂಡ್ ರನ್ ಕೇಸ್ ತಿದ್ದುಪಡಿ ಹಿಂಪಡೆಯುವಂತೆ ಒತ್ತಾಯಿಸಿ ಗುರುವಾರ ಪ್ರತಿಭಟನೆ ನಡೆಸಲಾಯಿತು.


ಚಾಲಕರ ಮುಖಂಡ ಸುರೇಶ್ ಮಾತನಾಡಿ, ಈ ತಿದ್ದುಪಡಿಯಿಂದ ಚಾಲಕರ ಜೀವನಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಅಪಘಾತವನ್ನು ಯಾರೂ ಬೇಕು ಎಂದು ಮಾಡುವುದಿಲ್ಲ. ಅಪಘಾತ ಜರುಗಿದ ಸಮಯದಲ್ಲಿ ಚಾಲಕರ ಮೇಲೆ ಜನರು ಹಲ್ಲೆ ಮಾಡುತ್ತಾರೆ. ಯಾರೇ ತಪ್ಪು ಮಾಡಿದರೂ ಚಾಲಕನ ಮೇಲೆಯೇ ಹೆಚ್ಚು ದೂರು ಕೇಳಿಬರುತ್ತದೆ. ಅಂತಹ ಸಮಯದಲ್ಲಿ ಅವರ ರಕ್ಷಣೆಗಾಗಿ ಲಾರಿ ಬಿಟ್ಟು ಓಡಿ ಹೋಗಬೇಕಾದ ಸಂದರ್ಭ ಬರಬಹುದು. ಈ ಕಾನೂನು ಜಾರಿಯಾದರೆ ಚಾಲಕರು ಜೀವನ ನಡೆಸುವುದು ಕಷ್ಟಕರವಾಗಬಹುದು. ಇಡೀ ದೇಶದಲ್ಲಿಯೇ ಮುಷ್ಕರ ಪ್ರಾರಂಭವಾಗಿದೆ. ಚಾಲಕರ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.


ಪ್ರತಿಭಟನಾಕಾರರು ಬೆಟ್ಟದಪುರ ಪೊಲೀಸ್ ಠಾಣೆಯಿಂದ ನಾಡಕಚೇರಿ ವರೆಗೂ ಮೆರವಣಿಗೆ ನಡೆಸಿ ಧಿಕ್ಕಾರದ ಘೋಷಣೆ ಕೂಗುತ್ತಾ ಉಪ ತಹಸೀಲ್ದಾರ್ ಡಿ.ಟಿ. ಶಶಿಧರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.


ಚಾಲಕರ ಸಂಘದ ಶಬ್ಬೀರ್, ಗಣೇಶ್, ಸುರೇಶ್, ಚಿನ್ನರಾಜು, ಶ್ರೀನಿವಾಸ್, ಕಾಳಿಯಪ್ಪ, ರವಿ, ಚಿನ್ನತಂಬಿ, ಸಂತೋಷ್, ಕುಬೇರ್, ಮಾಲಿಂಗ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.