ಶಿವಮೊಗ್ಗ: ಕುವೆಂಪು ವಿವಿಯ ಅತಿಥಿ ಉಪನ್ಯಾಸಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ದೊರಬೇಕಾದ ಸವಲತ್ತುಗಳನ್ನು ನೀಡುತ್ತಿಲ್ಲ. ವೇತನ ನೀಡುವುದು ವಿಳಂಬವಾಗುತ್ತಿದೆ ಎಂದು ಆರೋಪಿಸಿ ಅತಿಥಿ ಉಪನ್ಯಾಸಕರು ಗುರುವಾರ ವಿವಿಯ ಕುವೆಂಪು ಶತಮಾನೋತ್ಸವ ಭವನದ ಎದುರು ಪ್ರತಿಭಟನೆ ನಡೆಸಿದರು.
ಕುವೆಂಪು ವಿವಿಯು ಅತಿಥಿ ಉಪನ್ಯಾಸಕರ ಬಗ್ಗೆ ನಿರಾಸಕ್ತಿ ತೋರುತ್ತಿದೆ. ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ. ಅತಿಥಿ ಉಪನ್ಯಾಸಕರ ಪದನಾಮವನ್ನು ಸಹಾಯಕ ಬೋಧಕರು ಎಂದು ಬದಲಾವಣೆ ಮಾಡಿ ಕುಲಸಚಿವರು ಸೇವಾ ಅನುಭವದ ಪ್ರಮಾಣ ಪತ್ರ ನೀಡಬೇಕು. ಅತಿಥಿ ಉಪನ್ಯಾಸಕರನ್ನು ಗೌರವಯುತವಾಗಿ ನಡೆಸಿಕೊಂಡು ವಿವಿಯ ಎಲ್ಲ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕುವೆಂಪು ವಿವಿಯು ಸಿಂಡಿಕೇಟ್ ಸಭೆಯ ನಿರ್ಣಯದಂತೆ ಅತಿಥಿ ಉಪನ್ಯಾಸಕರಿಗೆ 45 ಸಾವಿರೂ ರೂ. ವೇತನ ನಿಗಧಿ ಮಾಡಿದೆ. ಆದರೆ ಈ ಶೈಕ್ಷಣಿಕ ಸಾಲಿನಲ್ಲಿ ಸಿಂಡಿಕೇಟ್ ಸಭೆಯ ಗಮನಕ್ಕೆ ತಾರದೇ ವೇತನವನ್ನು ಕಡಿತಗೊಳಿಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ ವೇತನ ಮತ್ತು ವಿವಿಧ ಸೌಲಭ್ಯಗಳನ್ನು ಜ.24ರಿಂದಲೇ ಅನ್ವಯವಾಗುವಂತೆ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿ ಶೈಕ್ಷಣಿಕ ವರ್ಷದ ಸಂದರ್ಶನವನ್ನು ರದ್ದುಗೊಳಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೂ ಅದೇ ಅತಿಥಿ ಉಪನ್ಯಾಸಕರು ಮುಂದುವರೆಸಿ ಸೇವಾ ಭದ್ರತೆ ಒದಗಿಸಬೇಕು. 11 ತಿಂಗಳ ವೇತನ ಜಾರಿಗೊಳಿಸಬೇಕು ಮತ್ತು ವೇತನವನ್ನು ಪ್ರತಿ ತಿಂಗಳ 5ರೊಳಗೆ ನೀಡಬೇಕು ಎಂದು ಆಗ್ರಹಿಸಿದರು.
ವಿವಿಯ ಎಲ್ಲ ವಿಭಾಗದ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.