ನ್ಯೂಸ್

ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ

ನಂಜನಗೂಡು: ನಗರದ ದೇವೀರಮ್ಮನಹಳ್ಳಿ ಬಡಾವಣೆಯ ಸರ್ವೇ ನಂಬರ್ 58, 59 ರಲ್ಲಿನ 3.16 ಎಕರೆ ಪ್ರದೇಶದ ಖಾಸಗಿ ನಿವೇಶನಕ್ಕೆ ಸಂಬಂಧಿಸಿದ ಕಡತಗಳು ನಗರಸಭೆ ಕಚೇರಿಯಿಂದ ಕಾಣೆಯಾಗಿದ್ದು, ಭೂಗಳ್ಳರೊಂದಿಗೆ ಕೆಲ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಸ್ವತ್ತುಗಳನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿ ನಗರಸಭೆ ಕಚೇರಿ ಮುಂದೆ ಸೋಮವಾರ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ತಾಲೂಕು ದಸಂಸ ಸಂಚಾಲಕ ಶಂಕರಪುರ ಸುರೇಶ್ ಮಾತನಾಡಿ, ನಗರಸಭೆಗೆ ಸೇರಿದ ಕೋಟ್ಯಂತರ ರೂ. ಬೆಲೆಬಾಳುವ ನಿವೇಶನಗಳ ಮೂಲಕಡತಗಳು ಕಾಣೆಯಾಗಿವೆ. ಈ ಬಗ್ಗೆ ನೀಡಲಾದ ದೂರನ್ನು ಪರಿಗಣಿಸಿ ನಗರಸಭೆಯ ಆಡಳಿತಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ. ಆದರೆ ಅಕ್ರಮ ಖಾತೆ ಮಾಡಿರುವ ಅಧಿಕಾರಿಗಳು ಹಾಗೂ ಈ ಹಿಂದಿನ ಅಧ್ಯಕ್ಷರನ್ನು ರಕ್ಷಿಸಲು ಕೆಲ ಸಿಬ್ಬಂದಿಯೇ ಆಸ್ತಿಗೆ ಸಂಬಂಧಿಸಿದ ಕಡತಗಳನ್ನು ಕಣ್ಮರೆ ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನ ಮೇಲೆ ದೂರು ದಾಖಲು ಮಾಡಿರುವ ಅಧಿಕಾರಿಗಳು ಕೆಲವರನ್ನು ರಕ್ಷಿಸಲು ಮುಂದಾಗಿದ್ದು, ಆ ಮೂಲಕ ಕಡತಗಳ ನಾಪತ್ತೆ ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನದಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಾರ್ವಜನಿಕರು ನಗರಸಭೆಯಲ್ಲಿ ತಮ್ಮ ಆಸ್ತಿಗೆ ಸಂಬಂಧಿಸಿದ ಖಾತೆ ಮಾಡಿಸಲು ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳನ್ನು ಆಶ್ರಯಿಸಬೇಕಾಗಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಕಡತ ಕಾಣೆಯಾಗಿರುವ ಪ್ರಕರಣದಲ್ಲಿ ನಗರಸಭೆಯ ಅಂದಿನ ಅಧ್ಯಕ್ಷ, ಆಯುಕ್ತ ಹಾಗೂ ರೆವಿನ್ಯೂ ಇನ್ಸ್‌ಪೆಕ್ಟರ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗಾಗಿ ಲೋಕಾಯುಕ್ತಕ್ಕೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.


ಪ್ರತಿಭಟನೆಯಲ್ಲಿ ದಸಂಸ ಸಂಘಟನೆ ಪದಾಧಿಕಾರಿಗಳಾದ ಯಶವಂತ್‌ಕುಮಾರ್, ಹಗಿನವಾಳು ಚಿಕ್ಕಣ್ಣ, ಮರಿಸ್ವಾಮಿ, ಸುಧನ್, ನವೀನ್, ರವಿ, ಪ್ರಕಾಶ್, ಡಿ.ಸಿ.ಶಿವಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.