ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಡಿಸಿ ಕಚೇರಿ ಎದುರು ಬಂಜಾರ ಸಮಾಜದವರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದವರು. ಸೈನಾ ಭಗತ್ ಸ್ವಾಮೀಜಿ, ಕೆ.ಬಿ.ಅಶೋಕ ನಾಯ್ಕ, ಜಗದೀಶ್ ನಾಯ್ಕ ಇತರರಿದ್ದರು.  
ನ್ಯೂಸ್

ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣ ಖಂಡಿಸಿ ಧರಣಿ ಆರಂಭ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದ್ದು, ಸರಿಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಂಜಾರ ಸಂಘ, ರಾಜ್ಯ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ಮಾಜಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ, ಸೈನಾ ಭಗತ್ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿವೆ.

ಕೆ.ಬಿ.ಅಶೋಕ ನಾಯ್ಕ ಮಾತನಾಡಿ, ಸೆ.20ರವರೆಗೂ ಧರಣಿ ನಡೆಯಲಿದೆ. ಆಗಲೂ ನಮ್ಮ ಬೇಡಿಕೆ ಈಡೇರದಿದ್ದರೆ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ನಮ್ಮ ಸಮುದಾಯದವರು ವಿಧಾನಸೌಧ ಚಲೋ ಹಮ್ಮಿಕೊಳ್ಳಲಿದ್ದಾರೆ ಎಂದು ಸರ್ಕಾರವನ್ನು ಎಚ್ಚರಿಸಿದರು.

ಅಸಾಂವಿಧಾನಿಕ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿ ದಮನಿತ ಅಥವಾ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ, ಸಿ ವರ್ಗದವರಿಗೂ ಶೇ.6ರಷ್ಟು ಮೀಸಲಾತಿ ನೀಡಬೇಕು. ಅಲೆಮಾರಿಗಳನ್ನು ಯಾವ ವರ್ಗಕ್ಕೂ ಸೇರಿಸದೆ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲಾತಿ ಕಲ್ಪಿಸಬೇಕು. ಕೇಂದ್ರ ಸರ್ಕಾರ ನಡೆಸುವ ಜಾತಿಗಣತಿವರೆಗೆ ಒಳಮೀಸಲಾತಿ ವರ್ಗೀಕರಣ ಆದೇಶವನ್ನು ರಾಜ್ಯ ಸರ್ಕಾರ ತಡೆ ಹಿಡಿಯಬೇಕು ಎಂದು ಆಗ್ರಹಿಸಿದರು.

ಮೊದಲ ದಿನ ಶಿಕಾರಿಪುರ ತಾಲೂಕಿನ ಸದಾಶಿವಪುರ, ಬೆಂಡೆಕಟ್ಟೆ, ವಡ್ಡಿಗೆರೆ, ಬೇಗೂರು, ಮರಡಿ, ಜಾಲಿಮರಡಿ, ಇಟ್ಟಿಗೆಹಳ್ಳಿ, ಕೆಂಚಿಕೊಪ್ಪ, ಮುದ್ದೇನಹಳ್ಳಿ, ಬಾಳೆಕೊಪ್ಪ, ಸಿದ್ದನಪುರ, ಶಿವಮೊಗ್ಗ ತಾಲೂಕಿನ ಹೊಸಕೊಪ್ಪ, ಹೊಸಳ್ಳಿ, ಕುಸ್ಕೂರು, ಮಂಡೇನಕೊಪ್ಪ, ಸಂತೆಕಡೂರಿನ ತಾಂಡಾಗಳ ನಾಯಕ್, ಡಾವ್, ಕಾರಬಾರಿ ಮುಖಂಡರು ಮತ್ತು ನಿವಾಸಿಗಳು ಧರಣಿಯಲ್ಲಿ ತಮ್ಮ ಜನಾಂಗದ ಪೋಷಾಕುಗಳನ್ನು ಧರಿಸಿ ಪಾಲ್ಗೊಂಡರು.

ಬಂಜಾರ ಸಮಾಜದ ಪ್ರಮುಖರಾದ ನಾನ್ಯಾನಾಯ್ಕ, ಜಗದೀಶ್ ನಾಯ್ಕ, ನಾಗರಾಜ ನಾಯ್ಕ, ರಮೇಶ್ ನಾಯ್ಕ, ನಾಗೇಶ್‌ನಾಯ್ಕ, ಗಂಗಾನಾಯ್ಕ, ಶಿವಾನಾಯ್ಕ, ಆನಂದ್ ನಾಯ್ಕ, ಬಸವರಾಜ್ ನಾಯ್ಕ, ಗಿರೀಶ್ ನಾಯ್ಕ ಇತರರಿದ್ದರು.