ನ್ಯೂಸ್

ಫ್ರೀಡಂ ಪಾರ್ಕ್‌ನಲ್ಲಿ ಫೆ.28ರಿಂದ ಪ್ರತಿಭಟನೆ

ಶಿವಮೊಗ್ಗ: ಬೇಡಿಕೆ ಈಡೇರಿಕೆಗೆ ನಿವೃತ್ತ ಸರ್ಕಾರಿ ನೌಕರರು ಪ್ರತಿಭಟನೆ ಹಾದಿ ತುಳಿದಿದ್ದಾರೆ. 2022ರ ಜುಲೈ 1ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಲೆಕ್ಕಾಚಾರದಂತೆ ಆರ್ಥಿಕ ಸೌಲಭ್ಯ ನೀಡುವಂತೆ ಒತ್ತಾಯಿಸಿ ಫೆ.28ರಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿವೃತ್ತ ನೌಕರರ ವೇದಿಕೆ ರಾಜ್ಯ ಸಂಚಾಲಕ ಕೆ.ನಾಗಪ್ಪ , 10 ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ನಮ್ಮ ಬೇಡಿಕೆಗಳ ಕುರಿತು ಚರ್ಚೆಗೆ ಆಹ್ವಾನಿಸದೇ ಇದ್ದಲ್ಲಿ ಅಣ್ಣಾ ಹಜಾರೆ ಹಾಗೂ ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ಬೆಂಗಳೂರು ಚಲೋ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

2022ರಿಂದ 24ರ ಜುಲೈ ಅವಧಿಯಲ್ಲಿ 26,700 ನೌಕರರು ನಿವೃತ್ತರಾಗಿದ್ದು, 7ನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನಿವೃತ್ತಿ ಆರ್ಥಿಕ ಸೌಲಭ್ಯದಿಂದ ನೌಕರರು ವಂಚಿತರಾಗಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಲಾಗಿದೆ. ಮುಖ್ಯಮಂತ್ರಿಗಳು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೂ ಈವರೆಗೆ ಇದು ಈಡೇರಿಲ್ಲ ಎಂದರು.

ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಎಚ್.ಪರಮೇಶ್ವರಪ್ಪ, ಪ್ರಮುಖರಾದ ಕೆ.ಎಲ್.ಗಜೇಂದ್ರಪ್ಪ, ಸುಕನ್ಯಾ, ಎಂ.ಎನ್. ಪಾರ್ವತಿ, ಮಂಜುನಾಥ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.