ನ್ಯೂಸ್

ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ಖಂಡಿಸಿ 18ಕ್ಕೆ ಪ್ರತಿಭಟನೆ

ಶಿವಮೊಗ್ಗ: ಪಂಚಮಸಾಲಿ ಸಮಾಜವು 2ಎ ಮೀಸಲಾತಿಗಾಗಿ ಮಾಡುತ್ತಿರುವ ಹೋರಾಟವನ್ನು ಖಂಡಿಸಿ ಡಿ.18ರಂದು ಬೆಳಗ್ಗೆ 11ಕ್ಕೆ ಸೈನ್ಸ್ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಚಳವಳಿ ಸಂಘಟನೆ ಮತ್ತು ಹಿಂದುಳಿದ ಜನಜಾಗೃತಿ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಪ್ರೊ.ಎಚ್.ರಾಚಪ್ಪ ಹೇಳಿದರು.

ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿ ಹಿಂದುಳಿದಿರುವುದಾಗಿ ಪಂಚಮಸಾಲಿ ಸಮಾಜ ಸುಳ್ಳು ಬಿತ್ತರಿಸುತ್ತಿದೆ. ಈ ಮೂಲಕ ಹಿಂದುಳಿದ 102 ಜಾತಿಗಳ ಅನ್ನದ ತಟ್ಟೆಗೆ ಕೈ ಹಾಕಿದ್ದು ಅಕ್ಷ್ಯಮ್ಯ. ಮುಂದಿನ ದಿನಗಳಲ್ಲಿ ಜನಾಂದೋಲದ ಮೂಲಕ ಆ ಸಮಾಜದ ಷಡ್ಯಂತ್ರವನ್ನು ಬಯಲು ಮಾಡುವುದಾಗಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದಕ್ಕೆ ಅಹಿಂದದ ವಿರೋಧವಿದೆ. ಎಂಎಲ್‌ಎ, ಎಂಎಲ್‌ಸಿ, ಸಂಸದರು, ಜಿಪಂ, ತಾಪಂ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಪಂಚಮಸಾಲಿ ಸಮಾಜದವರಿಗೆ ಪ್ರಾತಿನಿಧ್ಯ ದೊರೆತಿದೆ. ಶೈಕ್ಷಣಿಕ ಮತ್ತು ಆರ್ಥಿಕವಾಗಿಯೂ ಸಮಾಜ ಮುಂದಿದೆ. ಆದರೂ 2ಎ ಮೀಸಲಾತಿ ಕೇಳುತ್ತಿರುವುದು ಸರಿಯಲ್ಲ ಎಂದರು. ಪ್ರಮುಖರಾದ ಮಹಮ್ಮದ್ ಸನಾವುಲ್ಲಾ, ಕಲ್ಲೂರು ಮೇಘರಾಜ್, ಆರ್.ಟಿ.ನಟರಾಜ್, ಉಮೇಶ್ ಯಾದವ್, ಚನ್ನವೀರಪ್ಪ ಗಾಮನಗಟ್ಟಿ, ಸುರೇಶ್ ಬಾಬು, ಚಂದ್ರಶೇಖರಪ್ಪ ಅತ್ತಿಗುಂದ, ಎಸ್.ವಿ.ರಾಜಮ್ಮ, ಭಾಸ್ಕರ್ ಬಾಬು ಸುದ್ದಿಗೋಷ್ಠಿಯಲ್ಲಿದ್ದರು.