ಶಿವಮೊಗ್ಗ: ಭದ್ರಾ ಜಲಾಶಯದ ಕೆಳ ಭಾಗದಲ್ಲಿ ನಿರ್ಮಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ರೈತ ಮುಖಂಡ ಕೆ.ಟಿ.ಗಂಗಾಧರ್ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಭದ್ರಾ ಜಲಾಶಯದಿಂದ ಲಕ್ಷಾಂತರ ಎಕರೆ ಭೂಮಿಗೆ ನೀರು ಒದಗಿಸಲಾಗುತ್ತಿದೆ. ಅನೇಕ ಜಿಲ್ಲೆಗಳಿಗೆ ಇದು ಕುಡಿಯುವ ನೀರನ್ನೂ ಒದಗಿಸುತ್ತಿದೆ. ಈಗ ಸರ್ಕಾರ ಕೈಗೊಂಡಿರುವ ಕಾಮಗಾರಿಯಿಂದ ಜಲಾಶಯಕ್ಕೆ ಅಪಾಯ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸದಿದ್ದರೆ ಕಾಮಗಾರಿ ಸ್ಥಳದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಶುದ್ಧ ನೀರಿನ ಘಟಕ ಸ್ಥಾಪಿಸುವ ಉದ್ದೇಶ ಸರಿ ಇದೆ. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಘಟಕ ನಿರ್ಮಾಣ ಮಾಡುತ್ತಿರುವ ಸ್ಥಳ ಸೂಕ್ತವಲ್ಲ. ಇಲ್ಲಿ ನೀರಿನ ಘಟಕ ನಿರ್ಮಾಣವಾದರೆ ಜಲಾಶಯಕ್ಕೆ ಅಪಾಯ ನಿಶ್ಚಿತ. ಜಲಜೀವನ್ ಮಿಷನ್ ಯೋಜನೆಯಡಿ 500 ಕೋಟಿ ರೂ. ಮೊತ್ತದ ಯೋಜನೆಯನ್ನು ಇಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಇದು ಜಲಾಶಯದ ಭದ್ರತೆಯ ಪ್ರಶ್ನೆ. ಆದ್ದರಿಂದ ಕೂಡಲೇ ಸರ್ಕಾರ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಕಾಮಗಾರಿ ಆರಂಭಿಸಿ ಮೂರು ತಿಂಗಳು ಕಳೆದಿದೆ. ಈ ಘಟಕಕ್ಕೆ 16 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಜಲಾಶಯ ಅತ್ಯಂತ ಸೂಕ್ಷ್ಮ, ಸುರಕ್ಷಿತ ಪ್ರದೇಶದಲ್ಲಿದೆ. ಇಲ್ಲಿ ಯಾವುದೇ ಯೋಜನೆಗಳು, ವಸತಿ ಗೃಹಗಳು, ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಜಲಾಶಯದಿಂದ ಕೇವಲ 500 ಮೀ ಒಳಗೆ ಈ ಘಟಕ ನಿರ್ಮಾಣ ಆಗುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಕಾರ್ಯಾಧ್ಯಕ್ಷ ಕೆ.ಎಸ್.ಪುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಮಂಜುನಾಥೇಶ್ವರ, ಹಸಿರುಸೇನೆ ಜಿಲ್ಲಾಧ್ಯಕ್ಷ ಜಗದೀಶ ನಾಯ್ಕ, ಪ್ರಮುಖರಾದ ಹಿರಿಯಣ್ಣ, ಮೂಡಲಪ್ಪ, ಲವಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.