ವಿರಾಜಪೇಟೆ: ಆದಿವಾಸಿ ಪಣಿ ಎರವರ ಪೊನ್ನಣ್ಣ ಕೊಲೆ ಪ್ರಕರಣ ಹಾಗೂ ಮೃತನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಸೇರಿದಂತೆ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆದಿವಾಸಿ ಸಂಘರ್ಷ ಸಮಿತಿ ಮೋರ್ಚಾದಿಂದ ಪಟ್ಟಣದ ತಾಲೂಕು ಕಚೇರಿ ಮುಂದೆ ಆತನ ಸಾವಿಗೆ ಕಾರಣವಾದ ಹಲಸಿನ ಮಿಡಿ ಇಟ್ಟು ಬುಧವಾರ ಪ್ರತಿಭಟನೆ ನಡೆಸಲಾಯಿತು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕಳೆದ ಡಿ.27ರಂದು ಚೆಂಬೆಳ್ಳೂರುವಿನಲ್ಲಿ ಪೊರುಕೊಂಡ ಬನ್ಸಿಪೂಣ್ಣಚ್ಚ ಅವರ ಲೈನ್ ಮನೆಯಲ್ಲಿದ್ದು, ತೋಟ ಕೆಲಸ ಮಾಡುತ್ತಿದ್ದ ಪಣಿ ಎರವರ ಪೊನ್ನಣ್ಣ ತನ್ನ ಪತ್ನಿ ಗೀತಾ ಜತೆ ಪಕ್ಕದ ತೋಟದಲ್ಲಿ ಅಡುಗೆಗೆ ಹಲಸಿನ ಮಿಡಿ ಕುಯ್ಯಲು ಹೋದ ಸಂದರ್ಭ ಆತನನ್ನು ಆ ತೋಟದ ಮಾಲೀಕ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅದಿವಾಸಿಯೊಬ್ಬ ಹಲಸಿನ ಮಿಡಿ ಕುಯ್ಯಲು ಹೋದಾಗ ಏಕಾಎಕಿ ಗುಂಡು ಹಾರಿಸಿ ಕೊಲ್ಲುವುದು ಅಮಾನವಿಯ ಕೃತ್ಯ. ಅಲ್ಲದೆ ಇದು ಜೀವಿಸುವ ಹಕ್ಕನ್ನು ಕಸಿದು ಕೊಂಡಂತೆ. ಈ ರೀತಿ ಪತ್ನಿ ಎದುರೇ ಗುಂಡಿಕ್ಕಿ ಹತ್ಯೆ ಮಾಡುವ ಪ್ರಬಲ ಸಮುದಾಯದ ದಮನಿತ ನಡೆ ಖಂಡನಿಯ ಎಂದು ನವಿ ಪತ್ರದಲ್ಲಿ ಕಿಡಿಕಾರಿದ್ದಾರೆ.
ಈ ಪ್ರಕರಣ ತಳ ಸಮುದಾಯವನ್ನು ನಡೆಸಿಕೊಳ್ಳುತ್ತಿರುವ ಕಠೋರ ಸಾಮಾಜಿಕ ವಾಸ್ತವವನ್ನು ಮುನ್ನೆಲೆಗೆ ತಂದಿದೆ. ಎರವರು ಯಾವುದೇ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ , ವಸತಿ, ಒಳ್ಳೆಯ ಉದ್ಯೋಗ ಇಲ್ಲದೆ ವಂಚಿತರಾಗಿ ನಿಕೃಷ್ಟ ಬದುಕು ಸಾಗಿಸುತ್ತಿದ್ದಾರೆ. ಕಾಫಿ ತೋಟದ ಲೈನ್ ಮನೆಯಲ್ಲಿ ತೋಟದಿಂದ ತೋಟಕ್ಕೆ ಅಲೆಯುತ್ತಾ ಕುಟುಂಬ ಸಮೇತ ದುಡಿದು ತಿನ್ನಬೇಕಿದೆ. ಜತೆಗೆ ಸಾಲದ ಸುಳಿಯಲ್ಲಿ ಸಿಲುಕಿ ನಲಗುತ್ತಿದ್ದಾರೆ. ಇವರನ್ನು ಲೈನ್ ಮನೆಯಿಂದ ಹೊರ ತಂದು ಅಗತ್ಯ ಸೌಲಭ್ಯ ಕಲ್ಪಿಸಬೇಕಿದೆ. ಇಂದಿಗೂ ಪ್ರಬಲ ಸಮುದಾಯಗಳ ದೌರ್ಜನ್ಯದಿಂದ ಎರವರು ಬಳಲುವಂತಾಗಿದೆ. ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇನ್ನಾದರೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಅಲ್ಲದೆ ಕೊಲೆ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜತೆಗೆ ಸರ್ಕಾರ ತಪ್ಪಿತಸ್ಥರ ಆಸ್ತಿ ಮುಟ್ಟುಗೊಲು ಹಾಕಿಕೊಳ್ಳಬೇಕು. ಅಲ್ಲದೆ ಮೃತನ ಪತ್ನಿ, ತಾಯಿ ಹಾಗೂ ತಂದೆಗೆ 20 ಲಕ್ಷ ರೂ. ಪರಿಹಾರ ನೀಡಬೇಕು. ವಸತಿ ನೀಡಬೇಕು. ಜತೆಗೆ ಮೃತನ ಸಹೋದರ ಪೂವಣ್ಣನಿಗೆ ಸೂಕ್ತ ಶಿಕ್ಷಣಕ್ಕೆ ಅನೂಕೂಲ ಮಾಡಿಕೊಡಬೇಕು. ಜತೆಗೆ ಪ್ರಕರಣದ ಸಾಕ್ಷಿಗಳಿಗೆ ಭದ್ರತೆ ಹಾಗೂ ಸೂಕ್ತ ರಕ್ಷಣೆ ನೀಡಬೇಕು. ಸರ್ಕಾರ ಲೈನ್‌ಮನೆಯ ಪದ್ಧತಿಗೆ ಕಡಿವಾಣ ಹಾಕಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿದ ವಿರಾಜಪೇಟೆ ತಾಲೂಕು ತಹಸೀಲ್ದಾರ್ ರಾಮಚಂದ್ರ ಮತನಾಡಿ, ನಿಮ್ಮೊಂದಿಗೆ ನಾವಿದ್ದೇವೆ. ತಪ್ಪಿತಸ್ಥರಿಗೆ ಕಾನೂನಿನಡಿ ಖಂಡಿತಾ ಶಿಕ್ಷೆಯಾಗಲಿದೆ. ಪ್ರಸ್ತುತ 8.25 ಲಕ್ಷ ರೂ. ಪರಿಹಾರ ಮಂಜೂರಾಗಿದ್ದು, ಅರ್ಧ ಪತ್ನಿಗೂ ಹಾಗೂ ಅರ್ಧ ಮೃತನ ತಾಯಿಗೂ ಪರಿಹಾರ ಸಿಗಲಿದೆ. ಪತ್ನಿಗೆ 18 ವರ್ಷ ಆಗಿಲ್ಲವಾದ್ದರಿಂದ 18 ತುಂಬಿದ ಬಳಿಕ ಸರ್ಕಾರಿ ಉದ್ಯೋಗ ಲಭಿಸಲಿದೆ. ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣ ಇಲಾಖೆ ಅಗತ್ಯ ಸೌಕರ್ಯ ಒದಗಿಸಲಿದೆ. ಮೃತನ ಸಹೋದರನ ಶಿಕ್ಷಣಕ್ಕೆ ವಸತಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಕಳಿಸಲಾಗುವುದು ಎಂದು ಭರವಸೆ ನೀಡಿದರು.
ಎಐಸಿಸಿಟಿಯು ರಾಜ್ಯಧ್ಯಕ್ಷ ಅಪ್ಪಣ್ಣ, ರಾಜ್ಯ ಸಮಿತಿ ಉಪಾಧ್ಯಕ್ಷ ಕೆ.ಇ.ಮೋಹನ್, ರಾಜ್ಯ ಕಾರ್ಯದರ್ಶಿ ಕ್ರಿಪ್ಟನ್ ರೋಜಾರಿಯೊ ಜಿಲ್ಲಾ ಕಾರ್ಯದರ್ಶಿ ಗೌರಿ, ಜಿಲ್ಲಾ ಸಹಕಾರ್ಯದರ್ಶಿ ಬೊಳಕ ಅಪ್ಪಣ್ಣ, ಜಿಲ್ಲಾ ಸಮಿತಿ ಸದಸ್ಯ ಗಪ್ಪು, ಸಂಘಟನೆಯ ದಕ್ಷಿಣ ಕನ್ನಡದ ಜಿಲ್ಲಾಧ್ಯಕ್ಷ ರಾಮಣ್ಣ ವಿಟ್ಲ ಈ ವೇಳೆ ಮಾತನಾಡಿದರು. ಪ್ರತಿಭಟನಾ ನಿರತರನ್ನು ಉದೇಶಿಸಿ ಮಾತನಾಡಿದರು. ಸಂಘಟನೆಯ ವಿರಾಜಪೇಟೆ ತಾಲೂಕು ಅಧ್ಯಕ್ಷ ಎಂ.ಕೆ.ಮೋಹನ್ ಇತರರಿದ್ದರು.