ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಕೆ.ಟಿ.ಗಂಗಾಧರ್, ವೀರೇಶ್, ಯಶವಂತರಾವ್ ಘೋರ್ಪಡೆ, ಹಾಲೇಶಪ್ಪ ಗೌಡ, ಈರಣ್ಣ ಪ್ಯಾಟಿ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.  
ನ್ಯೂಸ್

ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ ಪ್ರತಿಭಟನೆ

ಅರವಿಂದ ಅಕ್ಲಾಪುರ

ಶಿವಮೊಗ್ಗದ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಮಂಗಳವಾರ ರೈತ ಮುಖಂಡರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಯೋಜನೆಯ ವಿಸ್ತೃತ ವರದಿಯನ್ನು ಜನರು ಮುಂದಿಡದೆ ವಂಚಿಸಲಾಗುತ್ತಿದೆ. ಬೃಹತ್ ಯೋಜನೆ ಜಾರಿಗೂ ಮುನ್ನ ನಾಗರಿಕರು, ಪರಿಸರವಾದಿಗಳ ಜತೆಗೆ ಸಮಾಲೋಚನೆ ನಡೆಸಿಲ್ಲ. ಯೋಜನೆಯ ಸೂಕ್ತ ಮಾಹಿತಿಯನ್ನು ಸ್ಥಳೀಯರಿಗೆ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಮರೆಮಾಚಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆಯಿಂದಾಗಿ ರೈತರು ಜಮೀನುಗಳನ್ನು ಕಳೆದುಕೊಳ್ಳುತ್ತಾರೆ. ಸಸ್ಯ ಹಾಗೂ ಪ್ರಾಣಿಸಂಕುಲ ನಾಶವಾಗುತ್ತದೆ. ಪಂಪ್ಡ್ ಸ್ಟೋರೇಜ್‌ಗಿಂತ ಪವನ ವಿದ್ಯುತ್, ಸೌರಶಕ್ತಿ ಯೋಜನೆ, ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಮೂಲಕವೂ ಇಂಧನ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿಸಿಕೊಳ್ಳಬಹುದು. ಜಲಾಶಯಗಳ ನಿರ್ಮಾಣದಿಂದ ಭೂಮಿ ಕಳೆದುಕೊಂಡ ಸಂತ್ರಸ್ತರು ಹಲವರು. ಭೂಮಿ ಉಳಿಸಿಕೊಳ್ಳಲು ಹಲವು ವರ್ಷಗಳಿಂದ ಅವರು ಹೋರಾಡುತ್ತಲೇ ಇದ್ದಾರೆ. ಇದೀಗ ಮತ್ತೆ ಬದುಕು ಅತಂತ್ರವಾಗುವುದೆಂಬ ಭೀತಿ ಇವರನ್ನು ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ್ಕಾರ ಈ ಅವೈಜ್ಞಾನಿಕ ಕಾಮಗಾರಿಯನ್ನು ಕೈಬಿಡಬೇಕು. ದಟ್ಟ ಅರಣ್ಯದಲ್ಲಿ ಈ ಯೋಜನೆ ಬೇಡ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ನೂರಾರು ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಗಿ ಭೂಸವಕಳಿ ಉಂಟಾಗಿ ಅಪಾಯ ಹೆಚ್ಚಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ರೈತ ಮುಖಂಡ ಕೆ.ಟಿ.ಗಂಗಾಧರ್, ಪ್ರಮುಖರಾದ ಈರಣ್ಣ ಪ್ಯಾಟಿ, ಹಾಲೇಶಪ್ಪ ಗೌಡ, ಯಶವಂತ ರಾವ್ ಘೋರ್ಪಡೆ, ವೀರೇಶ್, ಪುಟ್ಟಣ್ಣ ಗೌಡ ಪ್ರತಿಭಟನೆಯಲ್ಲಿದ್ದರು.