ನ್ಯೂಸ್

ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟನೆ, ಗ್ರಾಮಸ್ಥರ ಬಂಧನ

ಶಿವಮೊಗ್ಗ: ಮುದುವಾಲ ಗ್ರಾಮದಲ್ಲಿ ಬುಧವಾರ ನೂತನ ರೈಲ್ವೆ ಕಾಮಗಾರಿಗೆ ಭೂಸ್ವಾಧೀನ ಪಡಿಸಿಕೊಳ್ಳಲು ಬಂದ ರೈಲ್ವೆ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ ಡಿಎಸ್‌ಎಸ್ ಮುಖಂಡ ಸೇರಿ 10ಕ್ಕೂ ಅಧಿಕ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿದರು.

ಶಿವಮೊಗ್ಗ-ರಾಣೆಬೆನ್ನೂರಿಗೆ ಮುದುವಾಲ ಮಾರ್ಗವಾಗಿ ಹೊಸ ರೈಲ್ವೆ ಯೋಜನೆ ನಡೆಯುತ್ತಿದ್ದು ರೈಲ್ವೆ ಯೋಜನೆಗೆ ಇಲಾಖೆ ಅಧಿಕಾರಿಗಳು ಭೂಸ್ವಾಧೀನಕ್ಕೆ ಮುಂದಾಗಿದ್ದರು. ಈ ವೇಳೆ ರೈಲ್ವೆ ಇಲಾಖೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿ ಶಿವಮೊಗ್ಗದ ಡಿಎಆರ್ ಮೈದಾನಕ್ಕೆ ಕರೆತಂದರು.
ಬಗುರ್‌ಹುಕುಂ ಸಾಗುವಳಿದಾರರಿಗೆ ಪರಿಹಾರ ನೀಡಬೇಕು. ಆದರೆ ರೈಲ್ವೆ ಇಲಾಖೆ ರೈತರನ್ನು ಒಕ್ಕಲೆಬ್ಬಿಸಿದೆ. ಕಡಿಮೆ ದರಕ್ಕೆ ಭೂಮಿ ಖರೀದಿಯಾಗಿದೆ. ಸರಿಯಾದ ಪರಿಹಾರ ಕೊಡಿತ್ತಿಲ್ಲ. 40 ಲಕ್ಷ ರೂ. ಎಕರೆಗೆ ಮಾರುಕಟ್ಟೆಯಲ್ಲಿ ಇದ್ದರೆ 10 ಲಕ್ಷ ರೂ. ಪರಿಹಾರ ಮಾತ್ರ ನೀಡಲಾಗುತ್ತಿದೆ. ಹಾಗಾಗಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಗ್ರಾಮಸ್ಥರು ಆರೋಪಿಸಿದರು.
ಡಿಎಸ್‌ಎಸ್ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ಟಿ.ಎಚ್.ಹಾಲೇಶಪ್ಪ, ರೈತರಾದ ಕಳಪ್ಪ, ಚಂದ್ರಕಾಂತ್, ಪ್ರದೀಪ್, ಸಂಜು, ದೇವರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.