ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಬೆಲೆ ಏರಿಕೆ ಖಂಡಿಸಿ ನ.11ರಂದು ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಾಡಿನ ಜನತೆ ಸಂತೋಷದಿಂದ ಹಬ್ಬ ಆಚರಿಸುವ ವಾತಾವರಣವನ್ನು ಕಾಂಗ್ರೆಸ್ ಸರ್ಕಾರ ನಿರ್ಮಿಸಿಲ್ಲ. ಬಡವರು, ರೈತರು, ವೃದ್ಧರು, ಯುವಕರು ಸೇರಿ ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಆದರಿಂದ ಬಿಜೆಪಿ ನಾಡಿನ ಜನರ ಪರವಾಗಿ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರಕ್ಕೆ ಜನರ ನೋವನ್ನು ತಲುಪಿಸಿ, ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲವಾದರೆ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪಾದಯಾತ್ರೆಗಳಲ್ಲಿ, ವಿಧಾನಸಭಾ ಕ್ಷೇತ್ರದಲ್ಲೂ ಪ್ರತಿಭಟನೆ ನಡೆಸಲಾಗುವುದು. ಜನಸಾಮಾನ್ಯರು, ಬಡವರು ಮತ್ತು ರೈತರ ಪರವಾಗಿ ಬಿಜೆಪಿ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು.
ಕಳೆದ ಮೂರು ವರ್ಷಗಳ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರೆ ನಿರಂತರ ಬೆಲೆ ಏರಿಕೆಯೊಂದೇ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ, ಮದ್ಯದ ದರ ಏರಿಕೆ, ನೀರಿನ ದರ ಹೆಚ್ಚಳ, ಅರಣ್ಯ ಸಫಾರಿ ಟಿಕೆಟ್ ದರ, ಸರ್ಕಾರಿ ಆಸ್ಪತ್ರೆಗಳ ಎಕ್ಸ್ರೇ ಮತ್ತು ಹೊರರೋಗಿಗಳ ಸಮಾಲೋಚನಾ ಶುಲ್ಕ ಹೆಚ್ಚಳ ಹೀಗೆ ಜನಸಾಮಾನ್ಯರ ಮೇಲೆ ಒಂದರ ಹಿಂದೆ ಒಂದರಂತೆ ಹೊರೆ ಹಾಕಲಾಗಿದೆ.
ಸಾರಿಗೆ ಇಲಾಖೆ ದುಸ್ಥಿತಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿರುವ ಸರ್ಕಾರ, ಸಾರಿಗೆ ನಿಗಮಗಳಿಗೆ ಪಾವತಿಸಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಇದರಿಂದ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಬಸ್ ಡಿಪೋಗಳಲ್ಲಿ ಡೀಸೆಲ್ ಖರೀದಿಸಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.50 ಬಸ್ಗಳು ಸಮರ್ಪಕವಾಗಿ ಸಂಚರಿಸದ ಹಿನ್ನೆಲೆ ವಿದ್ಯಾರ್ಥಿಗಳು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಇದೀಗ ಹಾಲು, ಮೊಸರು, ತುಪ್ಪ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದ ಮೂಲಕ ಜನರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಲಾಗಿದೆ. ಹಾಲಿನ ದರವನ್ನು ಲೀಟರ್ಗೆ 8 ರೂ. ಹೆಚ್ಚಿಸುವುದಾಗಿ ಘೋಷಿಸಿದ ಸರ್ಕಾರ, ವಾಸ್ತವದಲ್ಲಿ ವಿವಿಧ ಉತ್ಪನ್ನಗಳ ದರವನ್ನು 12 ರಿಂದ 13 ರೂ.ವರೆಗೆ ಹೆಚ್ಚಿಸಿದೆ. 1 ಕೆಜಿ ತುಪ್ಪದ ದರದಲ್ಲಿ 180 ರೂ. ಹೆಚ್ಚಳವಾಗಿದೆ. ಮೊಸರಿನ ದರದಲ್ಲೂ 14 ರೂ. ಏರಿಕೆಯಾಗಿದೆ. ತುಪ್ಪವೇನೂ ಐಷಾರಾಮಿ ವಸ್ತುವಲ್ಲ. ಸಾಮಾನ್ಯ ಕುಟುಂಬಗಳೂ ಬಳಸುವ ಅಗತ್ಯ ಆಹಾರ ಪದಾರ್ಥವಾಗಿದೆ. ಗ್ರಾಮೀಣ ಭಾಗದಲ್ಲಿ ಊಟಕ್ಕೆ ಅಡುಗೆ ಇಲ್ಲದಿದ್ದರೂ ಒಂದು ಲೋಟ ಹಾಲು ಕುಡಿದು ಮಲಗಬಹುದು ಎಂಬ ಮಾತಿದೆ. ಆದರೆ, ಇಂದು ಬಡ ಕುಟುಂಬಗಳು ಒಂದು ಲೋಟ ಹಾಲು ಖರೀದಿಸುವ ಮುನ್ನವೂ ಯೋಚಿಸುವ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದೆ ಎಂದು ಆರೋಪಿಸಿದರು.