ಶಿವಮೊಗ್ಗದಲ್ಲಿ ಕರವೇ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಮಂಜುನಾಥ್ ಕೋಟ್ಯಾನ್, ಗಂಗಾಧರ್, ಎಸ್.ರಂಗನಾಥ್, ಮಂಜುನಾಥ್, ವಿನಯ್ ಇದ್ದರು. 
ನ್ಯೂಸ್

ನಾರಾಯಣ ಗೌಡ ಬಂಧನ ಖಂಡಿಸಿ ಕರವೇ ಪ್ರತಿಭಟನೆ

ನವೀನ ಬಿ.ಎಂ

ಶಿವಮೊಗ್ಗ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರನ್ನು ಬಂಧಿಸಿರುವ ಕ್ರಮ ಖಂಡಿಸಿ ಕರವೇ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅನ್ಯ ಭಾಷೆ ವಲಸಿಗರ ಆಕ್ರಮಣದಿಂದ ಇಂದು ಕನ್ನಡ ನುಡಿ, ನಾಡು, ಸಂಸ್ಕೃತಿ ನಶಿಸಿಹೋಗುತ್ತಿರುವ ಪರಿಸ್ಥಿತಿ ಉಂಟಾಗಿದ್ದರೂ ಯಾವ ಅಧಿಕಾರಿಗಳು, ರಾಜಕಾರಣಿಗಳಾಗಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಡು, ನುಡಿ ಅದರ ಉಳಿವಿನ ಬಗ್ಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು ವಲಸಿಗರೊಂದಿಗೆ ಶಾಮೀಲಾಗಿ ನಮ್ಮ ನಾಡು, ನುಡಿ, ಸಂಸ್ಕೃತಿಗಳ ಅಧೋಗತಿಗೆ ಇಳಿಸಿರವುದು ಶೋಚನೀಯ ಎಂದು ದೂರಿದರು.
ಸರ್ಕಾರ ಈ ಕೂಡಲೆ ಎಲ್ಲ ನಾಮಫಲಕದಲ್ಲಿ ಕನ್ನಡ ಬಳಸುವುದು ಕಡ್ಡಾಯ ಮಾಡಿ, ಯಾರು ನಾಮಫಲಕದಲ್ಲಿ ಅನ್ಯ ಭಾಷೆಗೆ ಹೆಚ್ಚು ಒತ್ತು ಕೊಡುತ್ತಾರೋ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅನವಶ್ಯಕವಾಗಿ ರಾಜ್ಯಾಧ್ಯಕ್ಷರನ್ನು ಮತ್ತು ಕಾರ್ಯಕರ್ತರವನ್ನು ಬಂಧಿಸಿರುವುದನ್ನು ಈ ಕೂಡಲೆ ಬೇಷರತ್ತಾಗಿ ಬಂಧಮುಕ್ತಗೊಳಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಸಂಘಟನೆಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘಟನೆ ರಾಜ್ಯ ಕಾರ್ಯದರ್ಶಿ ಮಂಜುನಾಥ್ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಗಂಗಾಧರ್, ಪ್ರಧಾನ ಕಾರ್ಯದರ್ಶಿ ಎಸ್.ರಂಗನಾಥ್, ನಗರ ಉಪಾಧ್ಯಕ್ಷ ಮಂಜುನಾಥ್, ವಿನಯ್ ಇತರರಿದ್ದರು.