ಚಿಕ್ಕಮಗಳೂರು: ಆಜಾದ್ ಪಾರ್ಕ್ ಸಮೀಪ ನಗರಸಭೆಯಿಂದ ನಿರ್ಮಿಸಿರುವ ಜಿಮ್‌ಗೆ ಜೈ ಭೀಮ್ ಎಂದು ನಾಮಕರಣ ಮಾಡಲು ಒತ್ತಾಯಿಸಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರಿಗೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಮನವಿ ಸಲ್ಲಿಸಿದಾಗ ಸ್ಪಂದಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಊಟದ ವಿರಾಮದ ವೇಳೆ ನಗರಸಭೆ ಮುಂದೆ ಸದಸ್ಯರು ಪ್ರತಿಭಟನೆ ಮಾಡಿದರು. ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದಾಗ ಸೌಜನ್ಯಕ್ಕೂ ನೋಡಲಿಲ್ಲ. ನಮೋ ಜೀಮ್ ಎಂದು ನಾಮಕರಣ ಮಾಡಲಾಗಿದೆ ಎಂದು ಉದಾಸೀನತೆಯಿಂದ ಸಭೆಯಿಂದ ಹೊರ ನಡೆದಿದ್ದಾರೆ. ನಮೋ ಎಂದು ಹೆಸರಿಡಲು ನಗರಸಭೆಯಿಂದ ಅನುಮೋದನೆ ಪಡೆದಿಲ್ಲ. ಆದರೂ 20 ಮಂದಿಯಿಂದ ಸಹಿ ಹಾಕಿಸಿದ್ದಾರೆ. ಅವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಸದಸ್ಯ ಮುನೀರ್ ಆರೋಪಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಳೇ ವಿದ್ಯಾರ್ಥಿಗಳು ಒಕ್ಕೂಟ ರಚನೆ ಮಾಡಿಕೊಂಡು ಜಿಜೆಸಿ ಸಿಟಿ ಜಿಮ್‌ನ್ಯಾಷಮ್ ಎಂಬ ಹೆಸರಿನಲ್ಲಿ ವ್ಯಾಯಾಮ ಶಾಲೆ ಪ್ರಾರಂಭಿಸಿ 74 ವರ್ಷಗಳು ಕಳೆದಿವೆೆ. ಇಲ್ಲಿ ಅಭ್ಯಾಸ ಮಾಡಿದವರು ರಾಷ್ಟ್ರ ಮಟ್ಟದಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇತಿಹಾಸವಿರುವ ಜಿಮ್‌ಗೆ ಜೈ ಭೀಮ್ ಹೆಸರಿಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಸದಸ್ಯರಾದ ಲಕ್ಷ್ಮಣ್, ದೀಪಾ, ಮಂಜುಳಾ ಶ್ರೀನಿವಾಸ್, ಲೋಕೇಶ್, ಜಾವೀದ್, ಸಲ್ನಾ, ಶ್ರೀನಿವಾಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.