ಲಾಡಿ, ಪ್ರಾಂತ್ಯ, ಕರಿಂಜೆ, ಕಲ್ಲಬೆಟ್ಟು, ಸುವರ್ಣನಗರ ಹಾಗೂ ಕೋಟೆಬಾಗಿಲು ಪ್ರದೇಶದ ಜನರು ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ನ್ಯೂಸ್

ಸಾರ್ವಜನಿಕರಿಂದ ಮೆಸ್ಕಾಂ ಕಚೇರಿಗೆ ಮುತ್ತಿಗೆ

ಮೂಡುಬಿದಿರೆ:  ಪುರಸಭಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬುಧವಾರ ರಾತ್ರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
 ಲಾಡಿ, ಪ್ರಾಂತ್ಯ, ಕರಿಂಜೆ, ಕಲ್ಲಬೆಟ್ಟು, ಸುವರ್ಣನಗರ ಹಾಗೂ ಕೋಟೆಬಾಗಿಲು ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಕುಡಿಯುವ ನೀರು ಮತ್ತು ದೈನಂದಿನ ಕೆಲಸಗಳಿಗೆ ತೀವ್ರ ಅಡಚಣೆಯಾಗಿದೆ. ಈ ಬಗ್ಗೆ ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ ಎಂಬುದು ಜನರ ಮುಖ್ಯ ಆರೋಪವಾಗಿದೆ.
 ಸ್ಥಳೀಯ ನಿವಾಸಿ ಅಶ್ರಫ್ ಮಾತನಾಡಿ, ಒಂದು ವಾರದಿಂದ ವಿದ್ಯುತ್ ಸಮಸ್ಯೆ ಇದೆ. ಈ ಹಿಂದೆಯೇ ಕೋಟೆಬಾಗಿಲು ಭಾಗದಲ್ಲಿ ಲೋ ವೋಲ್ಟೇಜ್ ಮತ್ತು ತಂತಿ ಉರಿದು ಹೋಗಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
  ಮನೆಯಲ್ಲಿ ನಾಲ್ಕು ದಿನಗಳಿಂದ ನೀರಿಲ್ಲದೆ ತೊಂದರೆಯಾಗಿದೆ. ಅಡುಗೆ ಮಾಡಲು, ಮಕ್ಕಳಿಗೆ ಓದಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ ಕತ್ತಲೆಯಲ್ಲಿ ಕಳೆಯುವುದು ಕಷ್ಟಕರವಾಗಿದೆ. ಅಧಿಕಾರಿಗಳನ್ನು ಕೇಳಿದರೆ ಮರ ಬಿದ್ದಿದೆ, ಕಂಬ ಕಟ್ ಆಗಿದೆ ಎಂಬ ಸಬೂಬುಗಳನ್ನು ನೀಡುತ್ತಿದ್ದಾರೆಯೇ ಹೊರತು ಪರಿಹಾರ ನೀಡುತ್ತಿಲ್ಲ ಎಂದು ಮಹಿಳೆಯರು ದೂರಿದರು.