ವಿನೋದಾ 
ನ್ಯೂಸ್

ಮದ್ಯದಂಗಡಿ ವಿರೋಧಿಸಿ ಪ್ರತಿಭಟನೆ 30ಕ್ಕೆ

ರಿಪ್ಪನ್‌ಪೇಟೆ: ಅಮೃತ ಗ್ರಾಮದಲ್ಲಿ ತೆರೆಯಲು ಉದ್ದೇಶಿಸಿರುವ ಎಂಎಸ್‌ಐಎಲ್ ಮದ್ಯದಂಗಡಿಯನ್ನು ವಿರೋಧಿಸಿ ಮಹಿಳೆಯರು ಡಿ.30ರಂದು ಅಮೃತ ಗ್ರಾಪಂ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಗ್ರಾಪಂ ಉಪಾಧ್ಯಕ್ಷೆ ವಿನೋದಾ ಯೋಗೇಂದ್ರ ಹೇಳಿದರು.

ಸರ್ಕಾರ ಎಂಎಸ್‌ಐಎಲ್ ಮದ್ಯದಂಗಡಿ ತೆರೆಯುವುದರಿಂದ ಗ್ರಾಮದಲ್ಲಿ ನೆಮ್ಮದಿ ಹಾಳಾಗುತ್ತದೆ. ಮುಗ್ಧ ಜನರನ್ನು ಸರ್ಕಾರವೇ ಮದ್ಯವ್ಯಸನಕ್ಕೆ ಪ್ರೆರೇಪಿಸಿದಂತಾಗುತ್ತದೆ. ಮದ್ಯದಂಗಡಿ ಸ್ಥಾಪನೆ ಜಾಗದ ಸಮೀಪವೇ ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿ ನಿಲಯವಿದೆ. ಮದ್ಯದಂಗಡಿ ಆರಂಭಿಸಿದರೆ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮದ್ಯದಂಗಡಿ ಮಾಡಲು ಹೊರಟವರು ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರದ ಶಾಸಕರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮದ್ಯ ಕುಡಿತದಿಂದ ಜನರಿಗಾಗುವ ಅನ್ಯಾಯ ತಪ್ಪಿಸಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮದ್ಯದಂಗಡಿ ವಿರೋಧಿ ಹೋರಾಟವನ್ನು ಬೆಂಬಲಿಸಿ, ಮಂಜೂರಾತಿಯನ್ನು ಶಾಸಕರು ರದ್ದುಪಡಿಸಬೇಕೆಂದು ಆಗ್ರಹಿಸಿದರು. ಕವಿತಾ, ಗೌರಮ್ಮ ಮತ್ತಿತರರು ಗೋಷ್ಠಿಯಲ್ಲಿದ್ದರು.