ನ್ಯೂಸ್

ಈಶ್ವರಪ್ಪ ವಿರುದ್ಧ ಪ್ರತಿಭಟನೆ: ಪ್ರಿಯಾಂಕ್ ಖರ್ಗೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ

ಬೆಂಗಳೂರು : ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮಗೆ ಆಗ್ರಹಿಸಿ ನಡೆಸಿದ್ದ ಪ್ರತಿಭಟನೆ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ ವಿಧಿಸಿದೆ.

ವಿಶೇಷ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಇದೇ ಪ್ರಕರಣದಲ್ಲಿ ಇತರೆ ಆರೋಪಿಗಳಿಗೆ 10 ಸಾವಿರ ರೂ. ದಂಡ ವಿಧಿಸಿ ಹೈಕೋರ್ಟ್‌ನ ಮತ್ತೊಂದು ಪೀಠವು ಅವರ ಅರ್ಜಿ ವಜಾ ಮಾಡಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ತಡೆ ವಿಧಿಸಿದೆ.

ಹೀಗಾಗಿ ಅರ್ಜಿದಾರರ ವಿರುದ್ಧ ವಿಚಾರಣೆಗೆ ತಡೆ ನೀಡಬೇಕೆಂದು ಕೋರಿದರು. ಇದನ್ನು ಆಲಿಸಿದ ಪೀಠವು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದಲ್ಲಿನ ಎ್ಲ ಪ್ರಕ್ರಿಯೆಗಳಿಗೆ ಮುಂದಿನ ವಿಚಾರಣೆವರೆಗೆ ತಡೆ ವಿಧಿಸಲಾಗಿದೆ ಎಂದು ಮಧ್ಯಂತರ ಆದೇಶ ಮಾಡಿದೆ.