ಶೇಷಾದ್ರಿಪುರಂ ರೈಲ್ವೆ ಮೇಲ್ಸೇತುವೆ ಮತ್ತು ರಾಗಿಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆ ಖಂಡಿಸಿ ಎಸ್.ಎಂ.ಮಧುಸೂದನ್, ನಯಾಜ್, ರಘು, ನೂರುಲ್ಲಾ, ಶರತ್, ಲೋಕೇಶ್, ಸಂಪ್ರೀತ್, ರಾಹುಲ್ ಮುಂತಾದವರು ಪ್ರತಿಭಟನೆ ನಡೆಸಿದರು.  
ನ್ಯೂಸ್

ರೈಲ್ವೆ ಮೇಲ್ಸೇತುವೆಯಲ್ಲಿ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ನಗರದ ಶೇಷಾದ್ರಿಪುರಂ ರೈಲ್ವೆ ಮೇಲ್ಸೇತುವೆ ಮತ್ತು ರಾಗಿಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು ಕೂಡಲೇ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಮಂಗಳವಾರ ಸ್ಥಳೀಯರು ಕನ್ನಡಪರ ಹೋರಾಟಗಾರರೊಂದಿಗೆ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ರಸ್ತೆ ಗುಂಡಿಗಳಿಂದ ಕೂಡಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ವಾಹನಗಳು ಸಂಚರಿಸಿದಾಗ ಉಂಟಾಗುವ ಧೂಳಿನಿಂದ ನಾಗರಿಕರು ಪರಿತಪಿಸುತ್ತಿದ್ದಾರೆ. ಮೇಲ್ಸೇತುವೆಯಿಂದ ಕೆಲವರು ಮಾಂಸದ ತ್ಯಾಜ್ಯಗಳನ್ನು ಕೆಳಕ್ಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅನೇಕ ತಿಂಗಳುಗಳಿಂದ ಈ ಪರಿಸ್ಥಿತಿಯಿದ್ದರೂ ರಸ್ತೆಯ ಗುಂಡಿ ಮುಚ್ಚುವ ಕೆಲಸವಾಗುತ್ತಿಲ್ಲ. ಅಲ್ಲಲ್ಲಿ ಡಾಂಬರೀಕರಣದ ನೆಪದಲ್ಲಿ ತೇಪೆ ಹಾಕಲಾಗಿದೆ. ಮೇಲ್ಸೇತುವೆ ತುದಿಯಿಂದ ಸುಮಾರು ಅರ್ಧ ಕಿ.ಮೀ. ದೂರದವರೆಗಾದರೂ ಕಾಂಕ್ರಿಟ್ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪರ ಹೋರಾಟಗಾರರಾದ ಎಸ್.ಎಂ.ಮಧುಸೂದನ್, ಎಂ.ರವಿಪ್ರಸಾದ್, ನಯಾಜ್, ಕಿಶೋರ್, ನೂರುಲ್ಲಾ, ರಘು, ಅನಿಲ್‌ಕುಮಾರ್, ಶರತ್, ಮಂಜ, ಲೋಕೇಶ್, ಕೌಶಿಕ್, ಎಚ್.ಭರತ್, ಸಂಪ್ರೀತ್, ಅಭಿಷೇಕ್, ರಾಹುಲ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.