ಮದ್ದೂರು: ಕೆರೆಗಳು ರೈತರ ಜೀವನಾಡಿಯಾಗಿದ್ದು, ಅವುಗಳನ್ನು ಉಳಿಸಿ ಸಂರಕ್ಷಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ಬೆಸಗರಹಳ್ಳಿ ವಲಯದ ಕುಂಟನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಕೆಂಚನಕಟ್ಟೆ ಕೆರೆ ಹಸ್ತಾಂತರ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ 724 ಕೆರಗಳನ್ನು ಅಭಿವೃದ್ಧಿಗೊಳಿಸಿ ನೀರನ್ನು ಶೇಖರಣೆ ಮಾಡುವ ಜತೆಗೆ ರೈತರು ಬೇಸಾಯ ಮಾಡಿ ಸಂತೃಪ್ತಿ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗಿದೆ. ಇದಕ್ಕೆ ಸ್ಥಳೀಯ ಯುವಕರ ಪಾತ್ರ ಮತ್ತು ಸಹಕಾರ ಅತ್ಯಮೂಲ್ಯವಾಗಿದೆ. ಮುಂದಿನ ದಿನಗಳಲ್ಲಿ ಕೆರೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಕ್ಕೂ ನೀರು ಅತ್ಯಮೂಲ್ಯವಾಗಿದ್ದು ಹಾಗೂ ರೈತಾಪಿ ವರ್ಗಕ್ಕೂ ನೀರು ಬಹುಮುಖ್ಯವಾದ ಅಂಶವಾಗಿದೆ. ಇದನ್ನರಿತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ರಾಜ್ಯಾದ್ಯಂತ 800 ಕೆರೆಗಳನ್ನು ಅಭಿವೃದ್ಧಿಗೊಳಿಸಿ ಜೀವಕಳೆ ತರುವ ಜತೆಗೆ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಚೇತನ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸುತ್ತಿದೆ. ಮನುಷ್ಯನಿಗೆ ಜೀವಜಲಗಳಾದ ಕೆರೆ, ಕಟ್ಟೆ, ನದಿಗಳು ಬಹು ಮುಖ್ಯವಾಗಿದ್ದು, ಇವುಗಳನ್ನು ಉಳಿಸಲು ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಯೋಜನಾಧಿಕಾರಿ ಬಿ.ಆರ್. ಯೋಗೇಶ್ ಕನ್ಯಾಡಿ, ಕೆರೆ ಸಮಿತಿ ಅಧ್ಯಕ್ಷ ಮಧು, ಅಭಿಯಂತರ ಪುಷ್ಪರಾಜ್, ಕೃಷಿ ಮೇಲ್ವಿಚಾರಕ ಪವನ್, ಮುಖಂಡರಾದ ಮರಿಲಿಂಗಯ್ಯ, ಮಂಗೇಶ್ ಗೌಡ, ಬಿ.ಎಂ.ರಘು, ಗಿರೀಶ್, ನಾಗರಾಜು, ಕೃಷ್ಣ, ಜಯರಾಮ್ ಇತರರಿದ್ದರು.