ತ್ಯಾಗರ್ತಿ: ಮಾರಿಕಾಂಬಾ ಮತ್ತು ದುಗಾರ್ಂಬಾ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಮುಂದೆ ಅದರ ಪಾವಿತ್ರ್ಯ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ವಾನ್ ಕುಮಾರ್ ಭಟ್ ಹೇಳಿದರು
ನೂತನ ದೇವಾಲಯದ ಲೋಕಾರ್ಪಣೆ, ದೇವರ ಪ್ರತಿಷ್ಠಾಪನೆ ಹಾಗೂ ಚಂಡಿಕಾಯಾಗ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ, ಧರ್ಮಸಭೆ ಉದ್ದೇಶಿಸಿ ಮಾತನಾಡಿದರು.
ಸಾಮೂಹಿಕವಾಗಿ ಮಾಡುವ ಕಾರ್ಯಗಳಿಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ. ತಮ್ಮ ಮನೆಯ ಕಾರ್ಯದಂತೆ ಎಲ್ಲರೂ ಪ್ರೋತ್ಸಾಹ ನೀಡಿದ್ದಾರೆ. ನಿತ್ಯವೂ ದೇವಿಯ ಆರಾಧಕರಾದ ಹೊರನಾಡು ಜೋಯಿಸರು ಹಾಗೂ ತಪಸ್ವಿಗಳಾದ ಇಲ್ಲಿನ ಸತ್ಯ ಪೀಠದ ಸ್ವಾಮೀಜಿ ವರಿಂದ ಲೋಕಾರ್ಪಣೆಗೊಂಡು ದೇವಿ ಸಾನ್ನಿಧ್ಯ ಪ್ರಾಪ್ತವಾಗಿದೆ ಎಂದರು.
ಮುಂದೆ ನಿತ್ಯವೂ ಪೂಜಾ ಕೈಂಕರ್ಯಗಳು ಶ್ರದ್ಧೆ, ಭಕ್ತಿಯಿಂದ ನಡೆಸಬೇಕು. ವಾರ್ಷಿಕ ವರ್ಧಂತಿ ಉತ್ಸವ, ಜಾತ್ರೆ ಸಂದರ್ಭದಲ್ಲಿ ಎಲ್ಲರೂ ಇದೇ ರೀತಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಇಲ್ಲಿನ ಜನರ ಸಂಘಟನೆ ಉತ್ತಮವಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಯೋಜನೆ ತಾಲೂಕು ಯೋಜನಾಧಿಕಾರಿ ಶಾಂತಾನಾಯ್ಕ ಮಾತನಾಡಿ, ದೇವಾಲಯ ನಿರ್ಮಾಣ ಮಾಡುವ ಯೋಗ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ. ಮೂರಾಲ್ಕೂ ತಲೆಮಾರುಗಳಿಗೆ ಒಮ್ಮೆ ಇಂತಹ ಯೋಗ ಸಿಗಲಿದೆ ಎಂದರು.
ದೇವರಿಗೆ ವಿಶೇಷ ಅಲಂಕಾರ, ಪೂಜೆ, ಮಹಾಮಂಗಳಾರತಿ, ಹಣ್ಣು ಕಾಯಿ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿನ ಸತ್ಯ ಪೀಠದ ಶ್ರೀಧರ ಭಾರತಿ ತೀರ್ಥರು ಚಂಡಿಕಾಯಾಗದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೇವಾಲಯ ಸಮಿತಿ ಅಧ್ಯಕ್ಷ ಕೆ ಬಿ.ಗಣಪತಿ, ಗ್ರಾಪಂ ಅಧ್ಯಕ್ಷೆ ಪ್ರಭಾವತಿ, ಉಪಾಧ್ಯಕ್ಷೆ ರೇಣುಕಾ, ಹಿರೇಬಿಲಗುಂಜಿ ಗ್ರಾಪಂ ಅಧ್ಯಕ್ಷ ಎಚ್.ಆರ್.ಪ್ರಶಾಂತ್ ಖಂಡೋಜಿ, ಪ್ರಮುಖರಾದ ಶಾಂತಲಕ್ಷ್ಮೀ, ಟಿ.ಕೆ.ಹನುಮಂತಪ್ಪ, ಖಂಡೋಜಪ್ಪ, ನಾರಾಯಣ ಮೂರ್ತಿ, ಮಹೇಂದ್ರ ಕುಮಾರ್, ಜೈಕುಮಾರ್, ಹರೀಶ್ ಕುಮಾರ್ ಯೋಗೀಶ್ ಇನ್ನಿತರರಿದ್ದರು.