ಸೊರಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಜಾಥಾ ನಡೆಸಿದರು. ಎಚ್.ಗಣಪತಿ, ಸದಾನಂದ ಗೌಡ, ಅಣ್ಣಪ್ಪ, ಕೆ.ವಿ.ಗೌಡ, ಕಲ್ಲಪ್ಪ ಇತರರಿದ್ದರು. 
ನ್ಯೂಸ್

ಪ್ರಜಾಪ್ರಭುತ್ವಕ್ಕಾಗಿ ಸಂವಿಧಾನವನ್ನು ರಕ್ಷಿಸಿ

ಶಿವಕುಮಾರ ಎಸ್.ಪಿ.

ಸೊರಬ: ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ. ಮತಗಳ್ಳರೇ ಅಧಿಕಾರ ಬಿಡಿ ಎಂದು ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಚೇರಿಯಿಂದ ತಹಸೀಲ್ದಾರ್ ಕಚೇರಿವರೆಗೂ ಮೆರವಣಿಗೆ ನಡೆಸಿದರು.

ಸುಳ್ಳು ಭರವಸೆ ನೀಡುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇದೀಗ ಮತಗಳ್ಳತನದ ಹಾದಿ ಹಿಡಿದಿದೆ. ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ತರುವ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಇದೀಗ ಮತಗಳ್ಳತನಕ್ಕೆ ನಿಂತಿದೆ. ಮಹಾದೇವಪುರ ಕ್ಷೇತ್ರವೊಂದರಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಕಳ್ಳತನ ಮಾಡಲಾಗಿದೆ. ಇನ್ನು ಕೆಲವೆಡೆ ಬದುಕಿದ್ದವರನ್ನೂ ಮೃತಪಟ್ಟಿದ್ದಾರೆ ಎಂದು ಹೇಳಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಎಚ್.ಗಣಪತಿ ದೂರಿದರು.

ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರ ಪಡೆಯುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದೀಗ ಚುನಾವಣಾ ಆಯೋಗದ ಸರದಿ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡಿರುವ ಅಪಮಾನ ಎಂದು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಕೆ.ವಿ.ಗೌಡ, ಕಲ್ಲಪ್ಪ, ಲಕ್ಷ್ಮಮ್ಮ. ಶಿವಪ್ಪ, ಶ್ರೀಕಾಂತ, ಮುಕ್ತಿಯಾರ್, ರಸೀದ್, ರತ್ನಮ್ಮ, ಪ್ರವೀಣ್, ಮಿಲನ್‌ಕುಮಾರ್, ವೀರೇಂದ್ರ ಗೌಡ, ಸಂಜೀವ್ ಇತರರಿದ್ದರು.