ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ; ತಜ್ಞರೊಂದಿಗೆ ಸಿಎಂ ಡಿಕೆಶಿ ಚರ್ಚೆ 
ನ್ಯೂಸ್

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ; ತಜ್ಞರೊಂದಿಗೆ ಸಿಎಂ ಡಿಕೆಶಿ ಚರ್ಚೆ

ಕೆಪಿಎಸ್​ಸಿ ಹಗರಣಗಳ ಬಗ್ಗೆ ಸಿಎಂ ಗಂಭೀರ ಚಿಂತನೆ

ಬೆಂಗಳೂರು : ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಾಗಿದ್ದು, ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಕಿಯೋನಿಕ್ಸ್‌ನ 50ನೇ ಸಂಸ್ಥಾಪನಾ ದಿನಾಚರಣೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಪಿಎಸ್‌ಸಿಯಲ್ಲಿ ಖದೀಮರು ಸೇರಿಕೊಂಡಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದ ಅಧಿಕಾರಿಗಳು ಹೀಗೆಲ್ಲಾ ಮಾಡುತ್ತಿದ್ದಾರೆ. ಸದಸ್ಯರುಗಳು ಅಂಗಡಿಯನ್ನೇ ತೆರೆದಿದ್ದಾರೆ. ಪೊಲೀಸರು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಶೀಘ್ರದಲ್ಲಿ ಬಹಿರಂಗಗೊಳ್ಳಲಿವೆ ಎಂದರು.

ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಎಸ್‌ಐಟಿ ರಚನೆಗೆ ನಿರ್ದೇಶನ ನೀಡಿರುವುದನ್ನು ಸ್ವಾಗತಿಸಿದ ಸಿಎಂ, ಇಡಿ ಕೂಡ ತನಿಖೆ ಮಾಡುತ್ತಿದೆ. ನಮ್ಮ ಪೊಲೀಸರು ತನಿಖೆಯನ್ನು ಚೆನ್ನಾಗಿ ಮಾಡುತ್ತಿದ್ದಾರೆ. ನ್ಯಾಯಾಲಯ ಎಸ್‌ಐಟಿ ತನಿಖಾಧಿಕಾರಿಗಳ ನೇಮಕದ ಸ್ವಾತಂತ್ರ್ಯವನ್ನು ರಾಜ್ಯಸರ್ಕಾರಕ್ಕೆ ಕೊಡಬೇಕಿತ್ತು. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ ಎಂದರು.

ನಾನು ಇಂಧನ ಸಚಿವನಾಗಿದ್ದಾಗ 22 ಸಾವಿರ ಮಂದಿ ಲೈನ್‌ಮ್ಯಾನ್, ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿದ್ದೆ. ಆಗ ಬಹಳ ಜಾಗೃತನಾಗಿ ಕೆಲಸ ಮಾಡಿದ್ದೇನೆ. ಅದಕ್ಕೂ ಮೊದಲು ಖಾಲಿ ಪೇಪರ್ ನಲ್ಲಿ ಬರೆಸುವ ಭ್ರಷ್ಟ ಸಂಪ್ರದಾಯ ಇತ್ತು. ಆದರೆ ನಾನು ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಸಿಎಂ ಹೇಳಿದರು.

ಎಚ್.ಕೆ.ಪಾಟೀಲರು ಗದಗವನ್ನು ಬರದ ಜಿಲ್ಲೆ ಎಂದು ಘೋಷಣೆ ಮಾಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆಂದು ನೀಡಿರುವ ಹೇಳಿಕೆ ಬಗ್ಗೆ ಕೇಳಿದಾಗ, ಗದಗ ಜಿಲ್ಲೆಯ ಪ್ರವಾಸ ಮಾಡಿದ್ದೇನೆ. ನನ್ನ ಜೊತೆ ಪಾಟೀಲರು ಇದ್ದರು. ಅವರು ಹೇಳಿದ್ದು ಸತ್ಯ. ಮಲೆನಾಡಿನಲ್ಲೇ ಬರ ಬಂದಿದೆ ಎಂದರೆ, ಗದಗದಲ್ಲಿ ಬರ ಇರುವುದಿಲ್ಲವೇ, ಜಿಲ್ಲೆಯ ಸಮಸ್ಯೆಯ ಅರಿವು ನನಗಿದೆ. ಈಗಾಗಲೇ 124 ತಾಲೂಕುಗಳು ಬರ ಘೋಷಣೆಯಾಗಿದೆ. 200 ತಾಲೂಕು ಘೋಷಣೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಅಗತ್ಯ ವರದಿಗಳು ಬರಬೇಕಿವೆ ಎಂದು ಸಿಎಂ ಉತ್ತರಿಸಿದರು.

ವಿಪಕ್ಷಗಳ ಮೇಲೆ ಸಿಎಂ ಗರಂ

ವಿರೋಧ ಪಕ್ಷಗಳು 10ದಿನ ಅಧಿವೇಶನದ ಸಮಯ ವ್ಯರ್ಥ ಮಾಡಿದರು. ಅವರಿಗೆ ಸಮಯದ ಬೆಲೆ ತಿಳಿದಿಲ್ಲ. ರಾಜಕಾರಣ ಮಾಡುವುದೇ ಅವರಿಗೆ ಮುಖ್ಯ. ಕ್ಯಾಬಿನೆಟ್ ಸಭೆ ಕರೆದು ತೀರ್ಮಾನ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ನಾಡಿನ ಜನರ ಸಮಸ್ಯೆ ಏನು ಅಂತ ತಿಳಿದು, ಜನರ ಮಾತಿಗೆ, ಅವರ ಬಾವನೆಗೆ ಬೆಲೆ ಕೊಡಬೇಕೆಂಬ ಕಾರಣಕ್ಕೆ ವಿಶೇಷ ಚರ್ಚೆಗೆ ಅಧಿವೇಶನ ಕರೆದಿದ್ದೇನೆ. ವಿಪಕ್ಷದವರು ಆಗ ಸಮಯ ವ್ಯರ್ಥ ಮಾಡಿ ಈಗ ಹೆಚ್ಚಿಗೆ ಸಮಯ ಬೇಕು ಎನ್ನುತ್ತಿದ್ದಾರೆ. ಅವರಿಗೆ ರಾಜಕೀಯ ಮುಖ್ಯ. ನಮಗೆ ಅಭಿವೃದ್ಧಿ ಮುಖ್ಯ, ರೈತರ ಸಮಸ್ಯೆ ಮುಖ್ಯ. ಜನರ ಹಸಿವು ನೀಗಿಸುವುದು ಮುಖ್ಯ ಎಂದು ಸಿಎಂ ತಿರುಗೇಟು ನೀಡಿದರು.

ಸಾಲ ಹೆಚ್ಚಾಗಿದ್ದು, ಹೊಸ ಯೋಜನೆ ಘೋಷಣೆ ಇಲ್ಲ

ಸಾಲ ಜಾಸ್ತಿಯಾಗಿರುವುದರಿಂದ ಹೊಸ ಯೋಜನೆ ಘೋಷಣೆ ಮಾಡುತ್ತಿಲ್ಲ. ಹಣಕಾಸು ಸಚಿವನಾಗಿ ನನಗೆ ಯಾವ ಯೋಜನೆಯನ್ನು ನಿಲ್ಲಿಸಬೇಕು, ಯಾವ ಯೋಜನೆ ಸೇರಿಸಬೇಕು ಎನ್ನುವುದು ಗೊತ್ತಿದೆ. ಬೆಲೆಗಳು ಗಗನಕ್ಕೆ ಏರಿದ್ದು, ಜನರ ಆದಾಯ ಕುಸಿದಿದೆ. ರೈತರು, ಜನರ ಬದುಕಿಗೆ ನೆರವಾಗುತ್ತಿದ್ದೇವೆ. ಈ ಮಧ್ಯೆ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂದಿದೆ ಎಂದು ಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಕೊಡಬೇಕಾದ ಅನುದಾನವನ್ನು ಮೊದಲು ನೀಡಲಿ. ಈ ಹಿಂದೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಣೆ ಮಾಡಿದರು. ಮೊದಲು ಅದನ್ನು ಕೊಡಲಿ. ಸಾಲ ಮನ್ನಾ ಮಾಡಿದ್ದು ರಾಹುಲ್ ಗಾಂಧಿಯವರ ಬದ್ಧತೆ. ಕುಮಾರಸ್ವಾಮಿ ಅವರ ಬದ್ಧತೆಯಲ್ಲ. ನಾವು ಬೆಂಬಲ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಎಂದು ಕುಮಾರಸ್ವಾಮಿ ಅವರ ಹೇಳಿಗೆ ಸಿಎಂ ಪ್ರತಿಕ್ರಿಯಿಸಿದರು.

ಇದೇ ವೇಳೆ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ ಎಂದರು.