ಬೆಂಗಳೂರು: ಹೊಸ ಗಣಿಗುತ್ತಿಗೆಗಳ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ(Proposal to Govt for Approval of New Mining Lease) . ಸ್ಥಗಿತಗೊಂಡಿರುವ ಕೆಲವು ಗಣಿಗಳ ಪುನರ್ ಪ್ರಾರಂಭಕ್ಕೂ ಕ್ರಮವಹಿಸಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ(S S Mallikarjuna) ತಿಳಿಸಿದರು.
ವಿಧಾನಸೌಧದಲ್ಲಿ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋೀರೇಷನ್ ಲಿಮಿಟೆಡ್ (ಕೆಎಸ್‌ಎಂಸಿಎಲ್)ನ 2025ನೇ ವರ್ಷದ ನೂತನ ಕ್ಯಾಲೆಂಡರ್ ಹಾಗೂ ಟೇಬಲ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಮಾನವ ಸಂಪನ್ಮೂಲ ಕೊರತೆಯನ್ನು ನೀಗಿಸಲು ಮತ್ತು ಪುನರ್ ಪ್ರಾರಂಭವಾಗುತ್ತಿರುವ ಗಣಿಗಳ ಅವಶ್ಯಕತೆಯಂತೆ ಹೊಸದಾಗಿ ಉದ್ಯೋಗಿಗಳ ನೇಮಕಕ್ಕೆ ಕ್ರಮವಹಿಸಿಲಾಗಿದೆ ಎಂದರು.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಹೆಚ್ಚಿನ ಲಾಭಾಂಶ ಗಳಿಸುವಲ್ಲಿ ಕೆಎಸ್‌ಎಂಸಿಎಲ್ ಮುಂಚೂಣಿಯಲ್ಲಿದೆ. ಮುಂದಿನ ದಿನಗಳಲ್ಲಿ ಸಂಸ್ಥೆ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಿ ಇನ್ನು ಹೆಚ್ಚಿನ ಲಾಭಾಂಶಗಳನ್ನು ಗಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಕೆಎಸ್‌ಎಂಸಿಎಲ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ದೊರೆಯುವ ವಿವಿಧ ಅದಿರು ಮತ್ತು ಅಲಂಕಾರಿಕ ಗ್ರಾನೈಟ್ ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿದೆ. ಸಂಸ್ಥೆಯು 2003-2004 ನೇ ಸಾಲಿನಿಂದ ಸತತವಾಗಿ ಲಾಭಾಂಶದಲ್ಲಿ ತೊಡಗಿದ್ದು 2021-22ನೇ ಸಾಲಿನಲ್ಲಿ ಅತ್ಯಧಿಕ 1610 ಕೋಟಿ ರೂ. ವಹಿವಾಟು ನಡೆಸಿದ್ದು, ತೆರಿಗೆ ನಂತರ 787ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿನಲ್ಲಿ 1473 ಕೋಟಿ ರೂ. ವಹಿವಾಟು ಮಾಡಿರುತ್ತದೆ ಎಂದು ತಿಳಿಸಿದರು.
ಪ್ರತಿ ವರ್ಷ ತನ್ನ ಲಾಭಾಂಶದ ಶೇ.30 ಮೊತ್ತವನ್ನು ಹಾಗೂ ಕಳೆದ ಸಾಲಿನಿಂದ ಲಭ್ಯವಿರುವ ಹೆಚ್ಚುವರಿ ಮೊತ್ತದ ಮೇಲೆ ಶೇ.30 ವಿಶೇಷ ಡಿವಿಡೆಂಡ್ ಮೊತ್ತವಾಗಿ ಸರ್ಕಾರಕ್ಕೆ ಪಾವತಿ ಮಾಡಲಾಗುತ್ತಿದೆ. ಅಲ್ಲದೆ, ವಾರ್ಷಿಕ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 15 ರಿಂದ 20 ಕೋಟಿ ರೂ. ನೀಡುತ್ತಿದ್ದು, ಲಾಭಾಂಶದಲ್ಲಿ ಶೇ.2 ಅನ್ನು ಸಿಎಸ್‌ಆರ್‌ಗೆ ಉಪಯೋಗಿಸಲಾಗುತ್ತಿದೆ ಎಂದರು.
ಸಂಸ್ಥೆಯು ಗಣಿ ಚಟುವಟಿಕೆಗಳ ಜೊತೆ ಇತರೆ ಚಟುವಟಿಕೆಗಳಿಗೆ ಬಂಡವಾಳ ಹೂಡಿಕೆಯಲ್ಲಿ ತೊಡಗಿದ್ದು ಇತ್ತೀಚೆಗೆ ರೇಷ್ಮೆ ಇಲಾಖೆಯ ಜೊತೆ ಜಂಟಿ ಸಹಭಾಗಿತ್ವದಲ್ಲಿ 666 ಕೋಟಿ ರೂ.ಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಮತ್ತು ಹಾಸನದಲ್ಲಿ ಸಂಸ್ಥೆಯು ಹೊಂದಿರುವ 14 ಎಕರೆ ಪ್ರದೇಶದಲ್ಲಿ ಸುಮಾರು 200 ಕೋಟಿ ರೂ. ಹೂಡಿಕೆ ಮಾಡಿ ಐಟಿ ಪಾರ್ಕ್ ನಿರ್ಮಾಣ ಮಾಡಲು ಕ್ರಮವಹಿಸಿಸಲಾಗಿದೆ ಎಂದು ಹೇಳಿದರು.
ಸಂಸ್ಥೆಯ ವಹಿವಾಟು ಮತ್ತು ಲಾಭಾಂಶಗಳನ್ನು ಆಧಾರವಾಗಿಟ್ಟುಕೊಂಡು ಸರ್ಕಾರವು 2017 -18 ನೇ ಸಾಲಿನಿಂದ ಸತತವಾಗಿ ಮುಖ್ಯಮಂತ್ರಿಯವರ ವಾರ್ಷಿಕ ರತ್ನ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಗಣಿಗಾರಿಕೆಯಲ್ಲಿ ಉತ್ತಮ ಪರಿಸರ ನಿರ್ವಹಣೆ ಮಾಡಿರುವ ಪ್ರಯುಕ್ತ 2023 ಮತ್ತು 2024ನೇ ಸಾಲಿನ ಪ್ರತಿಷ್ಠಿತ ಎಸ್‌ಕೆಒಸಿಎಚ್ ಅವಾರ್ಡ್ ಪಡೆದಿದೆ. ಪ್ರಸಕ್ತ ವರ್ಷದಿಂದ ಐಎಸ್‌ಒ ಪ್ರಮಾಣಪತ್ರ ಪಡೆದಿದೆ ಎಂದು ತಿಳಿಸಿದರು.
2025ನೇ ವರ್ಷದ ಈ ಸಂಸ್ಥೆಯ ನೂತನ ಡೈರಿಯನ್ನು ಕೆ.ಎಸ್.ಎಂ.ಸಿ.ಎಲ್ ಸಂಸ್ಥೆಯ ಅಧ್ಯಕ್ಷರು ಹಾಗೂ ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಯವಿಭವಸ್ವಾಮಿ ಹಾಗೂ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ನವೀನ್‌ಕುಮಾರ್ ರಾಜು ಹಾಗೂ ಸಂಸ್ಥೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.