ಕಡೂರು: ಕ್ಷೇತ್ರದಲ್ಲಿ ಅವಶ್ಯಕವಾಗಿರುವ 8 ಪಶು ಆಸ್ಪತ್ರೆಗಳ ಮಂಜೂರಾತಿಗಾಗಿ ಸಂಬಂಧಿಸಿದ ಸಚಿವರಲ್ಲಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಪಶುಆಸ್ಪತ್ರೆ ಆವರಣದಲ್ಲಿ ಸೋಮವಾರ ಕೆಆರ್‌ಐಡಿಎಲ್‌ಯಿಂದ 22.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿ, ತಾಲೂಕಿನ ಮರವಂಜಿ, ಸೋಮನಹಳ್ಳಿ, ಕಾಮನಕೆರೆ, ಎಮ್ಮೆದೊಡ್ಡಿ ಮೇಲ್ಭಾಗ, ಕೆರೆಸಂತೆ ಮತ್ತು ಬೀರೂರು ಹೋಬಳಿಯಲ್ಲಿ ಪಶು ಆಸ್ಪತ್ರೆಗಳ ಅವಶ್ಯಕತೆ ಹೆಚ್ಚಿದ್ದು ಆದರೆ ಸರ್ಕಾರ ಹೊಸ ಪಶು ಆಸ್ಪತ್ರೆಗಳ ಮಂಜೂರಾತಿ ನೀಡುತ್ತಿಲ್ಲ. ಹಾಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆಯ ಅರ್ಧದಷ್ಟಾದರೂ ಪಶು ಆಸ್ಪತ್ರೆಗಳನ್ನು ಕ್ಷೇತ್ರಕ್ಕೆ ಮಂಜೂರು ಮಾಡಿಸಲು ಪ್ರಯತ್ನ ನಡೆಸಲಾಗುವುದು ಎಂದರು.
ಕ್ಷೇತ್ರದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಲ್ಲಿರಬೇಕು. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಕೆಆರ್‌ಐಡಿಎಲ್‌ನಿಂದ ನಡೆಯುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುತ್ತವೆ. ಉಳಿದ ಇಲಾಖೆಗಳು ನಡೆಸುವ ಕಾಮಗಾರಿಗಳಲ್ಲೂ ಗುಣಮಟ್ಟ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಪಶು ಇಲಾಖೆಯ ಉಪನಿರ್ದೇಶಕ ಡಾ.ರಾಘವೇಂದ್ರ, ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್, ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಸಿ.ರವಿಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಎಸ್.ಎನ್.ಉಮೇಶ್, ಕೆಆರ್‌ಐಡಿಎಲ್ ನಿಗಮದ ಎಇಇ ವಿ.ಎನ್.ಅಶ್ವಿನಿ, ಪುರಸಭಾ ಮಾಜಿ ಉಪಾಧ್ಯಕ್ಷ ಡಿಶ್ ಮಂಜುನಾಥ್, ಪಶು ವೈದ್ಯಾಧಿಕಾರಿಗಳಾದ ಎಂ.ಆರ್.ಕೊಟ್ರೇಶ್, ಕಿರಣ್, ಅರುಣ್, ಪ್ರಭಾಕರ್, ಮುಖಂಡ ಕಳ್ಳಿಹೊಸಳ್ಳಿ ಜ್ಞಾನೇಶ್ ಮತ್ತಿತರರಿದ್ದರು.