ನ್ಯೂಸ್

ಮೂರು ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ

ಬೆಂಗಳೂರು:

ಯಾದಗಿರಿ, ಚಿಕ್ಕಮಗಳೂರು, ರಾಯಚೂರು ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಯ ಪ್ರಸ್ತಾಪಗಳಿಗೆ ಕೇಂದ್ರ ಸರ್ಕಾದಿಂದ ಶೀಘ್ರ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ತಿಳಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವರಾದ ಜಿ ಕಿಶನ್ ರೆಡ್ಡಿ ಅವರನ್ನು ಭೇಟಿ ಮಾಡಿದ ಅವರು ರಾಜ್ಯದ ಬೇಡಿಕೆಗಳನ್ನು ಮಂಡಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಚಿಕ್ಕಮಗಳೂರು ಹಾಗೂ ಯಾದದಗಿರಿ ಜಿಲ್ಲೆಯಲ್ಲಿ ಕೆಟಗರಿ-3 ವಿಜ್ಞಾನ ಕೇಂದ್ರ, ರಾಯಚೂರು ಜಿಲ್ಲೆಯಲ್ಲಿ ಕೆಟಗರಿ- 2, ಟೈಪ್ ಬಿ ವಿಜ್ಞಾನ ಕೇಂದ್ರ ಸ್ಥಾಪನೆೆಯ ಪ್ರಸ್ತಾಪಗಳನ್ನ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಶೀಘ್ರದಲ್ಲಿ ಒಪ್ಪಿಗೆ ನೀಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ ಹಾಗೂ ಡಿಜಿಟಲ್ ಡೋಮ್ ಪ್ಲಾನೆಟೋರಿಯಮ್ ನಿರ್ಮಾಣಕ್ಕಾಗಿ 9.36 ಏಕರೆ ಜಾಗವನ್ನು ಈಗಾಗಲೇ ಸಬ್-ರೀಜನಲ್ ಸೈನ್ಸ್ ಸೆಂಟರ್ ಸೊಸೈಟಿಗೆ ಹಂಚಿಕೆ ಮಾಡಲಾಗಿದೆ. ಅಲ್ಲದೇ, ಕೇಂದ್ರ ಸರ್ಕಾರಕ್ಕೆ ಡಿಪಿಆರ್‌ನ್ನು ಸಲ್ಲಿಸಲಾಗಿದೆ. ಈ ಕೇಂದ್ರಗಳ ಸ್ಥಾಪನೆಯಿಂದ ನಗರದ ಹಾಗೂ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದರು.

ಹಿಂದುಳಿದ ಜಿಲ್ಲೆಗಳಾಗಿರುವ ಕಲ್ಯಾಣ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸಲ್ಲಿಸಿರುವ ಪ್ರಸ್ತಾಪಗಳಿಗೆ ಶೀಘ್ರ ಒಪ್ಪಿಗೆ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಯಾದಗಿರಿ ಜಿಲ್ಲೆಯಲ್ಲಿ 22.25 ಕೋಟಿ ರೂಪಾಯಿಗಳ ಅನುದಾನದಲ್ಲಿ ಕೆಟಗರಿ-3, ಟೈಪ್-ಬಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಅಗತ್ಯವಿರುವ ಶೇ.50ರಷ್ಟು ಅನುದಾನ ರಾಜ್ಯ ಸರ್ಕಾರ ಭರಿಸುವ ಒಪ್ಪಿಗೆಯನ್ನು ನೀಡಿದೆ ಎಂದ ಅವರು ಕೇಂದ್ರ ಸ್ಥಾಪನೆಗೆ ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂ ಎತ್ತಿದ್ದಂತಹ ಪ್ರಶ್ನೆಗಳಿಗೆ ಉತ್ತರವನ್ನು ನೀಡಲಾಗಿದೆ ಎಂದು ಹೇಳಿದರು.

ರಾಯಚೂರಿಗೆ ಬಹು ಅವಶ್ಯವಿರುವ ಏಮ್ಸ್ ಮಂಜೂರಾತಿ ಪ್ರಕ್ರಿಯೆಯನ್ನ ಚುರುಕುಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವಂತೆ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನ ಪ್ರತಿನಿಧಿಸುವ ಸಚಿವರಾದ ಭಗವಂತ ಖೂಬಾ ಅವರನ್ನ ಭೇಟಿಯಾಗಿ, ರಾಯಚೂರಿನಲ್ಲಿ ಏಮ್ಸ್ ನ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.