Lokayukta  
ನ್ಯೂಸ್

ನಕಲಿ ದಾನಪತ್ರ ಕೋಟ್ಯಂತರ ರೂ.ಮೌಲ್ಯದ ಆಸ್ತಿ ಕಬಳಿಕೆ

ಲೋಕಾಯುಕ್ತರ ತನಿಖೆಯಿಂದ ಅಕ್ರಮ ಬೆಳಕಿಗೆ, ಮೂಲ ಮಾಲೀಕರ ಹೆಸರಿಗೆ ಆಸ್ತಿ ಮರು ನೋಂದಣಿ,

ಬೆಂಗಳೂರು: ಎಂಬತ್ತನಾಲ್ಕು ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಜಮೀನಿನ ಮೇಲೆ ನಕಲಿ ದಾನಪತ್ರದ ಸೃಷ್ಟಿಸಿ ಬೇರೆಯವರ ಹೆಸರಿಗೆ ವರ್ಗಾಯಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ಪೂರ್ಣಗೊಳಿಸಿರುವ ವಿಜಯಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯ ಚಿಕ್ಕತತ್ತಮಂಗಲ ಗ್ರಾಮದ ನಿವಾಸಿ ಭಾರತಿ ಲಕ್ಷ್ಮಣ ರೆಡ್ಡಿ (84) ಅವರಿಗೆ ಸೇರಿದ ಜಮೀನು ಕಬಳಿಕೆಯಾಗಿತ್ತು.

ಭಾರತಿ ಲಕ್ಷ್ಮಣ ರೆಡ್ಡಿ ಅವರ ಹೆಸರಿನಲ್ಲಿದ್ದ ಸರ್ವೆ ನಂ.95/1ರ 3 ಎಕರೆ, ಸರ್ವೆ ನಂ.94/1ರ 1 ಎಕರೆ 25 ಗುಂಟೆ ಹಾಗೂ ಸರ್ವೆ ನಂ.92/2ರ 1 ಎಕರೆ 8 ಗುಂಟೆ ಸೇರಿ 6 ಎಕರೆ 3 ಗುಂಟೆ ಜಮೀನನ್ನು ನಕಲಿ ದಾಖಲೆಗಳ ಆಧಾರದಲ್ಲಿ ಕಬಳಿಸಲು ಸಂಚು ರೂಪಿಸಲಾಗಿತ್ತು. 2025ರ ಆಗಸ್ಟ್ 13ರಂದು ಹೊಸಕೋಟೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ದಾನಪತ್ರ ನೋಂದಾಯಿಸಿ, ಆಸ್ತಿಯನ್ನು ಲಕ್ಷ್ಮಣ ರೆಡ್ಡಿ ಅವರ ಪುತ್ರ ಶ್ರವಣ್ ಕುಮಾರ್ ಹೆಸರಿಗೆ ವರ್ಗಾಯಿಸಲಾಗಿತ್ತು.

ಲೋಕಾಯುಕ್ತರಿಗೆ ದೂರು:

ಈ ವಂಚನೆ ಕುರಿತು ಭಾರತಿ ಲಕ್ಷ್ಮಣ ರೆಡ್ಡಿ ಅವರು 2025ರ ಅಕ್ಟೋಬರ್ 23ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಕಂದಾಯ ಇಲಾಖೆ ಅಧಿಕಾರಿಗಳನ್ನು ಕರೆದು ವಿಚಾರಣೆ ನಡೆಸಿದ್ದರು. ವಿಚಾರಣೆಯಲ್ಲಿ ಹೊಸಕೋಟೆ ಹಿರಿಯ ಉಪನೋಂದಣಾಧಿಕಾರಿ ಗೀತಾ, ಉಪನೋಂದಣಾಧಿಕಾರಿ ಹೆಚ್.ಜಿ.ಸುರೇಶ್, ವಿಜಯಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಲಕ್ಷ್ಮೀನಾರಾಯಣ ಹಾಗೂ ದೇವನಹಳ್ಳಿ ತಹಶೀಲ್ದಾರ್ ಕಚೇರಿ ನಿರ್ವಹಣಾಧಿಕಾರಿ ಎನ್. ಕಿರಣ್ ಹಾಜರಾಗಿ ಪ್ರಕರಣದ ಪ್ರಗತಿ ಕುರಿತು ಮಾಹಿತಿ ನೀಡಿದರು.

ನಕಲಿ ಮಾಲೀಕರ ವೇಷಧಾರಿ ಬಂಧನ:

ಲೋಕಾಯುಕ್ತರ ನಿರಂತರ ಮೇಲ್ವಿಚಾರಣೆಯ ಹಿನ್ನೆಲೆಯಲ್ಲಿ ಜಮೀನು ಮಾಲೀಕ ಭಾರತಿ ಲಕ್ಷ್ಮಣ ರೆಡ್ಡಿ ಅವರಂತೆ ವೇಷಧರಿಸಿದ್ದ ಆರೋಪಿತೆ ಲಕ್ಷ್ಮೀ ದೇವಮ್ಮ ಹಾಗೂ ನಕಲಿ ದಾನಪತ್ರದ ಫಲಾನುಭವಿ ಶ್ರವಣ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖೆ ಪೂರ್ಣಗೊಳಿಸಿರುವ ವಿಜಯಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿರುವುದಾಗಿ ಲೋಕಾಯುಕ್ತರ ಮುಂದೆ ವರದಿ ಸಲ್ಲಿಸಿದ್ದಾರೆ.

ಮರು ನೋಂದಣಿ:

ನಕಲಿ ದಾನಪತ್ರದ ಆಧಾರದ ಮೇಲೆ ಕಂದಾಯ ದಾಖಲೆಗಳಿಂದ ಭಾರತಿ ಲಕ್ಷ್ಮಣ ರೆಡ್ಡಿ ಅವರ ಹೆಸರನ್ನು ತೆಗೆದುಹಾಕಲಾಗಿತ್ತು. ಈ ದೋಷಪೂರಿತ ದಾಖಲೆಗಳನ್ನು ಸರಿಪಡಿಸುವಂತೆ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳು 2026ರ ಆಗಸ್ಟ್ 12ರಂದು ಆದೇಶ ಹೊರಡಿಸಿದ್ದಾರೆ.

ಇದರ ಅನ್ವಯ 2026-27ನೇ ಸಾಲಿನ ಕಂದಾಯ ದಾಖಲೆಗಳಲ್ಲಿ ಭಾರತಿ ಲಕ್ಷ್ಮಣ ರೆಡ್ಡಿ ಅವರನ್ನು ಮತ್ತೆ ಜಮೀನಿನ ಮಾಲೀಕರು ಹಾಗೂ ಖಾತೆದಾರರಾಗಿ ದಾಖಲಿಸಲಾಗಿದೆ ಎಂದು ಲೋಕಾಯುಕ್ತ, ನಾಯಮೂರ್ತಿ ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಲೋಕಾಯುಕ್ತರ ಕಳವಳ:

ಹಿರಿಯ ನಾಗರಿಕರ ಜಮೀನು ಹಾಗೂ ಆಸ್ತಿಗಳನ್ನು ನಕಲಿ ದಾಖಲೆ, ನಕಲಿ ದಾನಪತ್ರ ಮತ್ತು ವೇಷಧಾರಿಗಳ ಮೂಲಕ ವರ್ಗಾವಣೆ ಮಾಡುವ ಪ್ರಕರಣಗಳು ರಾಜ್ಯದ ವಿವಿಧೆಡೆ ನಡೆಯುತ್ತಿರುವುದನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿದ್ದಾರೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ಮಧು ಚೇತನ್ ಸೇರಿ ಇತರರ ವಿರುದ್ಧ ಆರೋಪಗಳಿವೆ. ಅಲ್ಲದೇ ಮತ್ತೊಂದು ಪ್ರಕರಣದಲ್ಲಿ 90 ವರ್ಷದ ಹಿರಿಯ ನಾಗರಿಕರಾದ ಲಕ್ಷ್ಮೀದೇವಮ್ಮ ವಂಚನೆಗೆ ಒಳಗಾಗಿರುವುದನ್ನೂ ಲೋಕಾಯುಕ್ತ ಕಚೇರಿ ಗಮನಕ್ಕೆ ತರಲಾಗಿದೆ. ಹೀಗೆ ವಿವಿಧ ಕಡೆಗಳಲ್ಲಿನ ಜಮೀನು ವಂಚನೆಯಾಗಿರುವ ಕುರಿತು ನೋಂದಣಿ ಮಹಾನಿರೀಕ್ಷಕರು, ಬೆಂಗಳೂರು ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕೈಗೊಂಡಿರುವ ಮುನ್ನೆಚ್ಚರಿಕಾ ಮತ್ತು ದಂಡನಾತ್ಮಕ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ. ಕ್ರಿಮಿನಲ್ ಪ್ರಕರಣದ ವಿಚಾರಣೆ ಮುಂದುವರಿದಿದ್ದು ನ. 25ರಂದು ಮಧ್ಯಾಹ್ನ 12.30ಕ್ಕೆ ಸಭೆ ನಿಗದಿಪಡಿಸಲಾಗಿದೆ ಎಂದು ಲೋಕಾಯುಕ್ತ, ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ.