ನ್ಯೂಸ್

ಆಸ್ತಿ ತೆರಿಗೆ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ: ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರ ತಿರುಗೇಟು

ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ, ಬಳಕೆದಾರರ ಶುಲ್ಕ ಹಾಗೂ ಒಳಚರಂಡಿ ಶುಲ್ಕ ಹೆಚ್ಚಾಗಲು ಹಿಂದಿನ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಪಾಲಿಕೆ ಆಡಳಿತವೇ ಕಾರಣ ಎಂದು ಪಾಲಿಕೆ ಕಾಂಗ್ರೆಸ್ ಸದಸ್ಯ ಎ. ನಾಗರಾಜ್ ತಿರುಗೇಟು ನೀಡಿದರು.

ಪಾಲಿಕೆಯಲ್ಲಿ ಹಿಂದಿನ ಬಿಜೆಪಿ ಆಡಳಿತದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ವಿರೋಧದ ನಡುವೆಯೂ ಬಳಕೆದಾರರ ಶುಲ್ಕ ಹಾಗೂ ಒಳಚರಂಡಿ ಶುಲ್ಕ ಹೆಚ್ಚಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಪಾಲಿಕೆ ಬಿಜೆಪಿ ಆಡಳಿತಾವಧಿಯ 2023ರ ಫೆಬ್ರವರಿ 9ರಂದು ನಡೆದ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಶುಲ್ಕವನ್ನು ವಾರ್ಷಿಕವಾಗಿ ಗೃಹ ಬಳಕೆಗೆ 600 ರೂ., ಗೃಹೇತರ 1200 ರೂ. ಹಾಗೂ ವಾಣಿಜ್ಯಕ್ಕೆ 2400 ರೂ.ಗೆ ಪರಿಷ್ಕರಿಸಿ ನಾಗರಿಕರಿಗೆ ಹೊರೆ ಮಾಡಲಾಗಿದೆ ಎಂದು ತಿಳಿಸಿದರು.

ಅಲ್ಲದೇ 2021-22ನೇ ಸಾಲಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976ಕ್ಕೆ ತಿದ್ದುಪಡಿ ತಂದು ಆಸ್ತಿ ತೆರಿಗೆಯ ಲೆಕ್ಕಾಚಾರವನ್ನು ಚಾಲ್ತಿ ಸಾಲಿನ ಮಾರುಕಟ್ಟೆ ದರ ಅಳವಡಿಸಿಕೊಂಡು ಲೆಕ್ಕಾಚಾರ ಮಾಡಲು ತೀರ್ಮಾನಿಸಿ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ವಿಷಯವು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಾಗ ಆಸ್ತಿ ತೆರಿಗೆ ಹೆಚ್ಚಳದ ಮಾನದಂಡಗಳಿಗೆ ಕಾಂಗ್ರೆಸ್ ಸದಸ್ಯರ ತೀವ್ರ ವಿರೋಧದ ನಡುವೆಯೂ ಮತಕ್ಕೆ ಹಾಕುವ ಮೂಲಕ ಆಸ್ತಿ ತೆರಿಗೆ ತಿದ್ದುಪಡಿ ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂದರು.

ಈ ಆದೇಶದ ಪ್ರಕಾರ 2024-25ನೇ ಸಾಲಿನಲ್ಲಿ ಮಾರುಕಟ್ಟೆ ದರಗಳು ಪರಿಷ್ಕರಣೆ ಆಗಿರುವುದರಿಂದ ಬಿಜೆಪಿ ಸರ್ಕಾರವು ಅನುಮೋದಿಸಿರುವಂತೆ ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಆದರೆ, ಬಿಜೆಪಿ ಸದಸ್ಯರು ಪಾಲಿಕೆ ಹಗಲು ದರೋಡೆ ನಡೆಸುತ್ತಿದೆ ಎಂದು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಪಾಲಿಕೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಒಳಚರಂಡಿ ಶುಲ್ಕ ಸೇರಿ ಬಿಜೆಪಿಯ ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವ ನಿರ್ಣಯ ಪರಿಶೀಲಿಸಿ ಚರ್ಚಿಸುವ ಮೂಲಕ ಕಡಿಮೆ ಮಾಡಲು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಮೇಯರ್ ವಿನಾಯಕ ಪೈಲ್ವಾನ್, ಸದಸ್ಯರಾದ ಅಬ್ದುಲ್ ಲತೀಫ್, ಮಂಜುನಾಥ್ ಗಡಿಗುಡಾಳ್, ಮುಖಂಡರಾದ ಜಗದೀಶ್, ಯಾಸಿನ್ ಯರಗಲ್ ಸುದ್ದಿಗೋಷ್ಠಿಯಲ್ಲಿದ್ದರು.