ಜೈಪುರ: ತಾವು ಹೊಂದಿದ್ದ ಖಾತೆಗಳಿಗೆ ಸಂಬಂಧಿಸಿದಂತೆ 3,024 ಕೋಟಿ ರೂ. ಮೌಲ್ಯದ ವಿವಿಧ ಕಾಮಗಾರಿಗಳ ಅನುದಾನಕ್ಕೆ ವಿತ್ತ ಸಚಿವಾಲಯ ಕೊಕ್ಕೆ ಹಾಕಿದ್ದೇ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ಬಂಡಾಯದ ಕಹಳೆ ಮೊಳಗಿಸಲು ಕಾರಣ ಎಂಬುದು ಇದೀಗ ಬಹಿರಂಗವಾಗಿದೆ.
ಡಿಸಿಎಂ ಆಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸಚಿವರೂ ಆಗಿದ್ದ ಸಚಿನ್ ಪೈಲಟ್ 2019-20ನೇ ಸಾಲಿನಲ್ಲಿ ತಮ್ಮ ಖಾತೆಗೆ ಸಂಬಂಧಪಟ್ಟಂತೆ 3,024 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕೆ ಮುಂದಾಗಿದ್ದರು. ಆದರೆ ಆರ್ಥಿಕ ಸಚಿವಾಲಯ ಅನಗತ್ಯವಾಗಿ ಈ ಯೋಜನೆಗಳ ಅನುದಾನ ಬಿಡುಗಡೆಯನ್ನು ತಡೆಹಿಡಿದಿತ್ತು ಎನ್ನಲಾಗಿದೆ.
ರಾಜಸ್ಥಾನದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವಾಲಯ ರಾಜ್ಯದ ಮುಖ್ಯ ಕಾರ್ಯದರ್ಶಿ ರಾಜೀವ ಸ್ವರೂಪ್ ನೇತೃತ್ವದ ರಾಜ್ಯ ಮಟ್ಟದ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿಯೊಂದಿಗೆ ಇದ್ದ ವ್ಯತ್ಯಾಸಗಳ ಬಗ್ಗೆ ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಇದು ಬಹಿರಂಗವಾಗಿದೆ.
ಈ ಯೋಜನೆಗಳಿಗೆ ರಾಜ್ಯ ಆರ್ಥಿಕ ಆಯೋಗದ (ಎಸ್ಎಫ್ಸಿ-5) ನಿಧಿಯಡಿಯಲ್ಲಿ ಅನುದಾನ ಕೊಡಬೇಕಾಗಿತ್ತು. ಆದರೆ, ವಿತ್ತ ಖಾತೆಯನ್ನು ಹೊಂದಿದ್ದ ಸಿಎಂ ಅಶೋಕ್ ಗೆಹ್ಲೋಟ್ ಅನುದಾನ ಬಿಡುಗಡೆ ಮಾಡಲು ನಿರಾಕರಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಂತರ ಇಲಾಖೆಯ ವ್ಯತ್ಯಾಸಗಳು ಎಂಬ ಶೀರ್ಷಿಕೆಯಡಿ ರಾಜಸ್ಥಾನದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವಾಲಯ ವರದಿಯನ್ನು ಬಿಡುಗಡೆ ಮಾಡಿದೆ.