ನ್ಯೂಸ್

ರಾಜ್ಯದಲ್ಲಿ ಪಿಎಫ್‌ಐ ಸೇರಿ ನಿಷೇಧಿತ ಸಂಘಟನೆಗಳು ಸಕ್ರಿಯ; ಕೆಎಸ್‌ ಈಶ್ವರಪ್ಪ ಈ ರೀತಿ ಹೇಳಿದ್ದೇಕೆ?

ಶಿವಮೊಗ್ಗ: ಕರ್ನಾಟಕದಲ್ಲಿ ಗಣಪತಿಗಳ ವಿಸರ್ಜನೆ ಸಂದರ್ಭದಲ್ಲಿ ಗಲಭೆ ಎಬ್ಬಿಸುವ ಹುನ್ನಾರವನ್ನು ಪಿಎಫ್‌ಐ ಸೇರಿ ಕೆಲ ನಿಷೇಧಿತ ಸಂಘಟನೆಗಳು ಮಾಡುತ್ತಿದ್ದು, ಇದರಲ್ಲಿ ವಿದೇಶಿ ಸಂಚು ಅಡಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಗಣಪತಿ ಉತ್ಸವ ವೇಳೆ ನಾಮಮಂಗಲ, ಬಿ.ಸಿ.ರೋಡ್ ಸೇರಿ ಅಲ್ಲಲ್ಲಿ ಗಲಭೆ ಎಬ್ಬಿಸುವ ಕೆಲಸಗಳು ಆಗುತ್ತಿವೆ. ಈ ಮೂಲಕ ಕೆಲ ರಾಷ್ಟ್ರದ್ರೋಹಿ ಮುಸ್ಲಿಮರು ರಾಜ್ಯದಲ್ಲಿ ನಿಧಾನವಾಗಿ ಚಿಗುರೊಡೆಯುತ್ತಿದ್ದಾರೆ. ರಾಜ್ಯದಲ್ಲಿ ಪಿಎಫ್‌ಐ ಸೇರಿ ನಿಷೇಧಿತ ಸಂಘಟನೆಗಳು ಸಕ್ರಿಯವಾಗಿರುವುದು ನಾಗಮಂಗಲ ಘಟನೆಯಿಂದ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿ ಅವರೇ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ: ಕರ್ನಾಟಕದಲ್ಲಿ ಆಗುತ್ತಿರುವ ಕೆಲ ಅಹಿತಕರ ಘಟನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಈ ಗಲಭೆಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಿದೆ. ನಾಗಮಂಗಲ ಗಣಪತಿ ವಿಸರ್ಜನೆ ವೇಳೆ ಮಸೀದಿಯಿಂದ ತಲವಾರು, ಪೆಟ್ರೋಲ್ ಬಾಂಬ್ ತರಲಾಗಿದೆ. ಔಷಧಿ ಅಂಗಡಿಯಿಂದ 200 ಮಾಸ್ಕ್ ಖರೀದಿ ಮಾಡಿ ಹಿಂದುಗಳ ಅಂಗಡಿಗಳ ಮೇಲೆಯೇ ಕಲ್ಲು ಎಸೆದಿದ್ದಾರೆ, ಬೆಂಕಿ ಹಚ್ಚಿದ್ದಾರೆ. ಇದು ಕೆಲ ರಾಷ್ಟ್ರದ್ರೋಹಿ ಮುಸ್ಲಿಮರ ಕೃತ್ಯವಾಗಿದೆ ಎಂದು ಕಿಡಿಕಾರಿದರು.

ಹಿಂದು ಸಮಾಜದ ಮೇಲೆ ರಾಷ್ಟ್ರ ದ್ರೋಹಿ ಮುಸ್ಲಿಮರು ಗಲಭೆ ಎಬ್ಬಿಸುತ್ತಿದ್ದಾರೆ. ಗಣೇಶೋತ್ಸವ ವೇಳೆ ಅಲ್ಲೊಂದು ಇಲ್ಲೊಂದು ಗಲಾಟೆ ಆಗುವುದು ಬಿಟ್ಟರೆ ಕರ್ನಾಟಕದಲ್ಲಿ ಯಾವತ್ತೂ ಶಾಂತಿ ನೆಲೆಸಿದೆ. ಆದರೆ ಕೆಲವರು ವಿದೇಶದಲ್ಲಿ ಕುಳಿತು ಕುಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಈಗಲೇ ಇದನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ ಭವಿಷ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ವೇಳೆ ಎಂ.ಜಿ.ಬಾಲು, ಮೋಹನ್, ಟಾಕ್ರಾ ನಾಯ್ಕ, ಜಗದೀಶ್​, ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.