ನ್ಯೂಸ್

ವಿದ್ಯಾರ್ಥಿಗಳ ಜ್ಞಾನ ವಿಸ್ತರಿಸುವ ಕಾರ್ಯಕ್ರಮ ಅಗತ್ಯ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಆರ್.ತುಳಸಿಕುಮಾರ್

ಬೆಂಗಳೂರು: ವಿಶ್ವವಿದ್ಯಾಲಯಗಳು ವರ್ಷವಿಡೀ ಸಿದ್ಧಪಡಿಸಿದ ಪಠ್ಯವನ್ನು ಬೋಧಿಸುವುದಕಷ್ಟೇ ಸೀಮಿತವಾಗದೆ ವಿದ್ಯಾರ್ಥಿಗಳ ಜ್ಞಾನ ವಿಸ್ತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಡಾ. ಎಚ್.ಎನ್. ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಯಲಹಂಕ ನಾಡಪ್ರಭುಗಳ ಪರಂಪರೆ: ರಣಭೈರೇಗೌಡರರಿಂದ ಮುಮ್ಮಡಿ ಕೆಂಪವೀರಪ್ಪಗೌಡರವರೆಗೆ (ಕ್ರಿ.ಶ 1320-ಕ್ರಿ.ಶ1728)’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ಅವರು ಮಾತನಾಡಿದರು.

ಬೆಂಗಳೂರು ವಿವಿಗೆ ತನ್ನದೇ ಆದ ಇತಿಹಾಸ ಇದೆ. ಈ ವಿವಿಯಿಂದ ಹಲವು ಗಣ್ಯರು ಪದವಿ ಪಡೆದಿದ್ದು, ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇಂತಹ ಹಿನ್ನೆಲೆಯಿರುವ ವಿವಿಗೆ ಈ ಬಾರಿ ನ್ಯಾಕ್‌ನಿಂದ ಎ ++ ಶ್ರೇಣಿ ಬಂದಿರುವುದು ಹೆಮ್ಮೆಯ ಸಂಗತಿ. ಇದರ ಜತೆಗೆ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸಲು ಆದ್ಯತೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಡಾ.ಅಂಬೇಡ್ಕರ್ ಅವರು ಸಮಯ ಸಿಕ್ಕಾಗಲೆಲ್ಲ ಮಹನೀಯರ ಕುರಿತು ಪುಸ್ತಕಗಳನ್ನು

ಓದುತ್ತಿದ್ದರು. ಅಲ್ಲದೆ, ತನ್ನ ಬದುಕಿನಲ್ಲಿ ಆದ ಅವಮಾನಗಳಿಂದ ಅವರು ಸಾಧನೆ ಮಾಡಲು ಸಾಧ್ಯವಾಯಿತು. ಆದ್ದರಿಂದ ನಮ್ಮ ಬದುಕಿನಲ್ಲಿ ಆಗಿಹೋಗಿರುವ ಕಹಿ ಘಟನೆಗಳು, ನಮ್ಮ ಪರಂಪರೆಯ ಬಡತನಗಳು ನಮಗೆ ಇತಿಹಾಸ ಸೃಷ್ಟಿ ಮಾಡಲು ಪ್ರೇರಣೆಯಾಗುತ್ತವೆ ಎಂದು ಸ್ವಾಮೀಜಿಯವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಹಿಸ್ಟರಿ ಆ್ಯಂಡ್ ಹೆರಿಟೇಜ್ ಆಫ್ ಬೆಂಗಳೂರು ಕೃತಿಯನ್ನು ಬಿಡುಗಡೆ ಮಾಡಲಾಯಿತು. ವಿವಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕೆಂಪೇಗೌಡ ಅಧ್ಯಯನ ಪೀಠ ಕಟ್ಟಡ ಕಾಮಗಾರಿಯನ್ನು ನಿರ್ಮಲಾನಂದನಾಥ ಶ್ರೀಗಳು ವೀಕ್ಷಿಸಿದರು.

ಕೆಂಪೇಗೌಡರ ಕುರಿತು ಇಂಗ್ಲಿಷ್ ಕೃತಿ ಅಗತ್ಯ:

ಬೆಂಗಳೂರು ವಿವಿ ಕುಲಪತಿ ಡಾ. ಜಯಕರ ಎಸ್.ಎಂ. ಮಾತನಾಡಿ, ನಾಡಪ್ರಭು ಕೆಂಪೇಗೌಡರ ಕುರಿತು ನಾವೆಷ್ಟು ತಿಳಿದುಕೊಂಡರೂ ಕಡಿಮೆಯೇ. ಅವರ ಬಗ್ಗೆ ಇನ್ನೂ ಅಧ್ಯಯನ ಮಾಡಲಿಕ್ಕೆ ಬಹಳಷ್ಟು ಇದೆ. ಈ ವಿಚಾರ ಸಂಕಿರಣಗಳಲ್ಲಿ ಮಂಡನೆಯಾದ ವಿಷಯಗಳು ಪುಸ್ತಕ ರೂಪದಲ್ಲಿ ಬರಬೇಕು. ಕೆಂಪೇಗೌಡರ ಕುರಿತು ಎಲ್ಲ ಪುಸ್ತಕಗಳೂ ಕನ್ನಡದಲ್ಲೇ ಇವೆ. ಬೇರೆ ಬೇರೆ ರಾಜ್ಯ, ದೇಶಗಳ ಜನರೂ ಕೆಂಪೇಗೌಡರ ಕುರಿತು ತಿಳಿದುಕೊಳ್ಳಬೇಕೆಂದರೆ ಇಂಗ್ಲಿಷ್‌ನಲ್ಲಿಯೂ ಪುಸ್ತಕಗಳು ಪ್ರಕಟಗೊಳ್ಳಬೇಕು ಎಂದರು.