ನ್ಯೂಸ್

ಪ್ರಾಧ್ಯಾಪಕರ ವರ್ಗಾವಣೆ: ಮಹಾರಾಣಿ, ನೃಪತುಂಗ ವಿವಿಗೆ ಉನ್ನತ ಶಿಕ್ಷಣ ಇಲಾಖೆ ನಿರ್ದೇಶನ

ಬೆಂಗಳೂರು: ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು 2025ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಯಲ್ಲಿ ಸೇರ್ಪಡೆ ಮಾಡುವ ಸಂಬಂಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯು ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.

ಈ ಎರಡೂ ವಿವಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶದಂತೆ 2025ನೇ ಸಾಲಿನ ವರ್ಗಾವಣೆಯಲ್ಲಿ ಸೇರ್ಪಡೆಗೊಳಿಸುವಂತೆ ಸಾಮಾಜಿಕ ಹೋರಾಟಗಾರರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರು ಮನವಿ ಸಲ್ಲಿಸಿದ್ದರು. ಈ ಮನವಿಗಳ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ನಿರ್ದೇಶಿಸಿದ್ದಾರೆ.

ಹಿನ್ನೆಲೆ ಏನು?:

2019ರಲ್ಲಿ ಕ್ಲಸ್ಟರ್ ವಿಶ್ವವಿದ್ಯಾಲಯವಾಗಿ ಆದೇಶವಾದ ನಂತರ ಬಂದಂತಹ ಪ್ರಾಧ್ಯಾಪಕರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿದ್ದೇವೆ. ಈ ಕಾರಣಯಿಂದ ಕಾಲೇಜು ಶಿಕ್ಷಣ ಇಲಾಖೆಯು ನಡೆಸುವ ವರ್ಗಾವಣೆ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಪ್ರಾಧ್ಯಾಪಕರ ವಾದವಾಗಿತ್ತು. ಆದರೆ, ಕಾಲೇಜು ಶಿಕ್ಷಣ ಇಲಾಖೆಯಿಂದಲೇ ವೇತನ ಪಡೆಯುತ್ತಿರುವುದರಿಂದ ಅವರಿಗೂ ವರ್ಗಾವಣೆ ನಿಯಮಗಳು ಅನ್ವಯವಾಗಲಿವೆ ಎಂದು ಇತರೆ ಕಾಲೇಜುಗಳ ಪ್ರಾಧ್ಯಾಪಕರ ವಾದವಾಗಿತ್ತು. ಇದೇ ನಿಯಮವನ್ನು ಕೆಎಟಿ ಕೂಡ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಕಾರ್ಯದರ್ಶಿ ಅವರು ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ.