ನ್ಯೂಸ್

250 ಕೋಟಿ ರೂ. ವಂಚನೆ ಪ್ರಕರಣ; ಸ್ಯಾಂಡಲ್​​ವುಡ್​ ಖ್ಯಾತ ನಿರ್ಮಾಪಕನ ಬಂಧನ

ಬೆಂಗಳೂರು: ನೂರಾರು ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹರ್ಬನ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಆನಂದ ಬಾಲಕೃಷ್ಣ ಅಪ್ಪುಗೋಳನನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ಬೆಳಗಾವಿಯಲ್ಲಿರುವ ಸಂಗೊಳ್ಳಿ ರಾಯಣ್ಣ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ 250 ಕೋಟಿ ರೂ. ಅಕ್ರಮ ವ್ಯವಹಾರ ಸಂಬಂಧ 2017ರಲ್ಲಿ ಅಧ್ಯಕ್ಷ ಸೇರಿದಂತೆ 16 ಮಂದಿ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಹೆಚ್ಚಿನ ತನಿಖೆ ಕೈಗೊಂಡು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಮೇರೆಗೆ ಸೊಸೈಟಿ ಅಧ್ಯಕ್ಷ ಆನಂದ ಬಾಲಕೃಷ್ಣ ಅಪ್ಪುಗೋಳನನ್ನು ಬಂಧಿಸಿ ಬೆಂಗಳೂರಿನ ಇಡಿ ವಿಶೇಷ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗೆ 7 ದಿನಗಳ ಕಾಲ ಕಸ್ಟಡಿಗೆ ಪಡೆದಿರುವುದಾಗಿ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಸೊಸೈಟಿಯಲ್ಲಿ ಅಂದಾಜು 26 ಸಾವಿರಕ್ಕೂ ಅಧಿಕ ಠೇವಣಿದಾರರು ಇದ್ದಾರೆ. ಅಧಿಕ ಬಡ್ಡಿ ಮತ್ತು ಲಾಭಾಂಶ ಕೊಡುವುದಾಗಿ ಆಮಿಷವೊಡ್ಡಿ 2017ರ ಮಾರ್ಚ್‌ವರೆಗೂ 250 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಆದರೆ, ಸಕಾಲದಲ್ಲಿ ಠೇವಣಿದಾರರಿಗೆ ಬಡ್ಡಿ ಅಥವಾ ಅಸಲು ಹಣವನ್ನು ವಾಪಸ್ ನೀಡುವಲ್ಲಿ ಸೊಸೈಟಿ ವಿಲವಾಗಿದೆ. ಠೇವಣಿದಾರರಿಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದೆ.

ಸಾರ್ವಜನಿಕರ ಹಣದಿಂದ ಸೊಸೈಟಿ ಸ್ಥಿರಾಸ್ತಿ ಮತ್ತು ಚರಾಸ್ತಿ ಖರೀದಿ ಮಾಡಿದೆ. ಗ್ರಾಹಕರಿಗೆ ಠೇವಣಿ ಅಥವಾ ಬಡ್ಡಿ ನೀಡದೆ ಮೋಸ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.