ನ್ಯೂಸ್

ಕುವೈತ್ ಭಾರತೀಯರಿಗೆ ಸಂಕಷ್ಟ; * 8 ಲಕ್ಷ ಭಾರತೀಯರಿಗೆ ವಲಸೆ ಕಾನೂನಿನ ಬಿಸಿ; 25 ಸಾವಿರ ಕನ್ನಡಿಗರಿಗೂ ತಲೆನೋವು

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಕರೊನಾ ಪರಿಣಾಮ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು, ಉದ್ಯೋಗ ನಷ್ಟ , ತೈಲ ಬೆಲೆ ಕುಸಿತ ಹಿನ್ನೆಲೆಯಲ್ಲಿ ದೇಶವಾಸಿಗಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಉದ್ದೇಶದಿಂದ ಕುವೈತ್ ಸರ್ಕಾರ ವಲಸಿಗ ಕಾನೂನು (ಎಕ್ಸ್​ಪಾಟ್ ಕೋಟಾ ಬಿಲ್) ಜಾರಿಗೊಳಿಸಲು ಮುಂದಾಗಿದೆ. ಇದರಿಂದಾಗಿ ಗಲ್ಪ್ ರಾಷ್ಟ್ರದಲ್ಲಿ ನೆಲೆಸಿರುವ ಸುಮಾರು 8 ಲಕ್ಷ ಭಾರತೀಯರಿಗೆ ಸಂಕಷ್ಟ ಎದುರಾಗಲಿದೆ.

ಕುವೈತ್ ನ್ಯಾಷನಲ್ ಅಸೆಂಬ್ಲಿಯ ಕಾನೂನು ಮತ್ತು ಶಾಸನ ಸಮಿತಿ ಈ ವಿಧೇಯಕಕ್ಕೆ ಸಮ್ಮತಿ ನೀಡಿದೆ. ಮಸೂದೆ ಕರಡನ್ನು ಸಂಬಂಧಿತ ಸಮಿತಿಗಳಿಗೆ ಕಳುಹಿಸಲಾಗಿದ್ದು, ಕಾನೂನು ಜಾರಿ ಸಂಬಂಧ ಸಮಗ್ರ ಯೋಜನೆ ಸಿದ್ಧಪಡಿಸಲಾಗುತ್ತಿದೆ.

ವಿಧೇಯಕದ ಪ್ರಕಾರ, ಕುವೈತ್​ನ ಒಟ್ಟು ಜನಸಂಖ್ಯೆಯಲ್ಲಿ ಶೇ.15 ಭಾರತೀಯರಿಗೆ ಇನ್ನುಮುಂದೆ ಆ ರಾಷ್ಟ್ರದಲ್ಲಿರಲು ಅವಕಾಶ ಸಿಗಲಿದೆ. ಆದರೆ, ಅನೇಕ ವರ್ಷಗಳಿಂದ ಲಕ್ಷಾಂತರ ಭಾರತೀಯರು ಕುವೈತ್​ನಲ್ಲಿ ಬದುಕು ಕಟ್ಟಿಕೊಂಡಿದ್ದು, ಈ ಕಾನೂನು ಜಾರಿಯಾದಲ್ಲಿ ಭಾರತೀಯ ವಲಸಿಗ ಸಮುದಾಯದ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಲಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರ ಕುವೈತ್ ಜತೆ ಮಾತುಕತೆ ನಡೆಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.

ಭಾರತೀಯರೆಷ್ಟಿದ್ದಾರೆ?: ಉತ್ತರದಲ್ಲಿ ಇರಾಕ್ ಮತ್ತು ದಕ್ಷಿಣದಲ್ಲಿ ಸೌದಿ ಅರೇಬಿಯಾ ಜೊತೆ ಗಡಿ ಹಂಚಿಕೊಂಡಿರುವ ಪಶ್ಚಿಮ ಏಷ್ಯಾದ ಪುಟ್ಟ ರಾಷ್ಟ್ರ ಕುವೈತ್​ನ ಒಟ್ಟು ಜನಸಂಖ್ಯೆಯೇ 43 ಲಕ್ಷ. ಇದರಲ್ಲಿ ಮೂಲನಿವಾಸಿಗಳ ಸಂಖ್ಯೆ ಕೇವಲ 13 ಲಕ್ಷ ಮಾತ್ರ. ಅಂದರೆ, 30 ಲಕ್ಷ ಜನ ಅನ್ಯರಾಷ್ಟ್ರಗಳಿಂದ ಬಂದಿರುವ ವಲಸಿಗರೇ ಆಗಿರುವುದು ವಿಶೇಷ. ಈ 30 ಲಕ್ಷ ವಲಸಿಗರ ಪೈಕಿ ಭಾರತೀಯ ವಲಸಿಗರ ಸಂಖ್ಯೆಯೇ ಸುಮಾರು 14.5 ಲಕ್ಷ. ಕುವೈತ್ ಜನಸಂಖ್ಯೆಯಲ್ಲಿ ಶೇ.70 ವಿದೇಶಿ ವಲಸಿಗರಿದ್ದು, ಆ ಪ್ರಮಾಣವನ್ನು ಶೇ.30ಕ್ಕೆ ತಗ್ಗಿಸಬೇಕೆಂದು ಕುವೈತ್ ಪ್ರಧಾನಿ ಶೇಕ್ ಸಬಾಹ್ ಅಲ್ ಖಾಲಿದ್ ಅಲ್ ಸಬಾಹ್ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೂ ರ್ಚಚಿಸಿದ್ದರು. ಅದೇ ಪ್ರಕಾರ ತರಲು ಹೊರಟಿರುವ ಹೊಸ ಕಾನೂನಿನ ಪ್ರಕಾರ ಒಟ್ಟು ಜನಸಂಖ್ಯೆಯ ಶೇ. 15 ಭಾರತೀಯರಿಗಷ್ಟೇ ಅವಕಾಶ ದೊರೆತರೆ, ಸುಮಾರು 6.5 ಲಕ್ಷ ಭಾರತೀಯರಷ್ಟೇ ಆ ದೇಶದಲ್ಲಿ ವಾಸ್ತವ್ಯ ಮುಂದುವರಿಸಬಹುದು. ಅಂದರೆ, ಸುಮಾರು 8 ಲಕ್ಷ ಭಾರತೀಯರು ಕುವೈತ್ ತೊರೆದು ದೇಶಕ್ಕೆ ಮರಳುವುದು ಅನಿವಾರ್ಯವಾಗುತ್ತದೆ. ಕುವೈತ್​ನಲ್ಲಿ ಬದುಕು ಕಟ್ಟಿಕೊಂಡ ಭಾರತೀಯರಲ್ಲಿ ಕೇರಳ, ತಮಿಳುನಾಡಿನವರು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕನ್ನಡಿಗರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಕುವೈತ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಾರ ಸುಮಾರು 28 ಸಾವಿರ ಭಾರತೀಯರು ಕುವೈತ್ ಸರ್ಕಾರದ ವಿವಿಧ ಉದ್ಯೋಗಗಳಲ್ಲಿದ್ದಾರೆ. ಇವರಲ್ಲಿ ಹಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸ್​ಗಳಾಗಿದ್ದರೆ, ಹಲವರು ರಾಷ್ಟ್ರೀಯ ತೈಲ ಕಂಪನಿಗಳಲ್ಲಿ ಇಂಜಿನಿಯರ್​ಗಳಾಗಿ, ಇನ್ನಷ್ಟು ಜನ ವಿಜ್ಞಾನಿಗಳಾಗಿ ದುಡಿಯುತ್ತಿದ್ದಾರೆ. ಸುಮಾರು 5.23 ಲಕ್ಷ ಭಾರತೀಯರು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಇಷ್ಟು ಜನ ಉದ್ಯೋಗಿಗಳೊಂದಿಗೆ ನೆಲೆಸಿರುವ ಅವಲಂಬಿತರ ಸಂಖ್ಯೆಯೇ 1.16 ಲಕ್ಷದಷ್ಟಿದೆ. ಇನ್ನು ಸುಮಾರು 60 ಸಾವಿರ ವಿದ್ಯಾರ್ಥಿಗಳು ಕುವೈತ್​ನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಕುವೈತ್ ಭಾರತೀಯರಿಂದ ಭಾರತದ ಆರ್ಥಿಕತೆಗೆ ವಾರ್ಷಿಕ ಸುಮಾರು 4.8 ಶತಕೋಟಿ ಡಾಲರ್​ಗಳಷ್ಟು ಹಣದ ಹರಿವಿದೆ.

ಯಾರನ್ನು ಉಳಿಸಿಕೊಳ್ಳಬಹುದು?: ಇದು ಕುವೈತ್ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯ. ತನ್ನ ಆರ್ಥಿಕತೆಯಲ್ಲಿ ಅತಿ ದೊಡ್ಡ ಪಾಲುದಾರ (ಭಾರತೀಯ ಮೂಲ) ಎನಿಸಿಕೊಂಡಿರುವ ಅಥವಾ ನಿರ್ದಿಷ್ಟ ವ್ಯಕ್ತಿಗಳ ಅಗತ್ಯ ದೇಶಕ್ಕಿದೆ ಎಂದು ಭಾವಿಸಿದಲ್ಲಿ ಅಂಥವರನ್ನು ಮಾತ್ರ ಶೇ.15ರ ವ್ಯಾಪ್ತಿಗೆ ತಂದು ಉಳಿಸಿಕೊಳ್ಳಬಹುದು. ಮಧ್ಯಮ, ಬಡ ವರ್ಗದ ಅನಿವಾಸಿ ಭಾರತೀಯರಿಗೆ ಈ ಕಾನೂನಿನಿಂದ ಹೆಚ್ಚು ಸಮಸ್ಯೆಯಾಗಬಹುದು ಎಂದೂ ವಿಶ್ಲೇಷಿಸಲಾಗುತ್ತಿದೆ. ಸುಮಾರು ಶೇ. 85 ಮುಸ್ಲಿಂ ಜನಸಂಖ್ಯೆ (ಒಟ್ಟು ಜನಸಂಖ್ಯೆ - 42,70,571) ಇರುವ ಕುವೈತ್​ನ ಕಾನೂನು ವ್ಯವಸ್ಥೆ ಬ್ರಿಟಿಷ್ ಕಾಮನ್ ಲಾ, ಫ್ರೆಂಚ್ ಸಿವಿಲ್ ಲಾ, ಈಜಿಪ್ಟ್​ನ ಸಿವಿಲ್ ಲಾ ಮತ್ತು ಇಸ್ಲಾಮಿಕ್ ಕಾನೂನುಗಳ ಮಿಶ್ರಣ. ಈ ದೇಶದ ಅರ್ಧಕ್ಕರ್ಧ ನ್ಯಾಯಾಧೀಶರು ಈಜಿಪ್ಟ್ ಮೂಲದವರು. 1 ಅಥವಾ 3 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಅವರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಕಾನೂನು ಜಾರಿಯಾದರೆ ನ್ಯಾಯಾಧೀಶ ಹುದ್ದೆಗೂ ಸ್ಥಳೀಯರೇ ಬರುತ್ತಾರಾ ಎಂಬ ಪ್ರಶ್ನೆಯೂ ಇದೆ.

25 ಸಾವಿರ ಕರಾವಳಿಗರು: ಮಂಗಳೂರು: ಕುವೈತ್​ನ ಪ್ರಸ್ತಾವಿತ ವಲಸಿಗರ ಕೋಟಾ ಮಸೂದೆ ಜಾರಿಯಾದರೆ ರಾಜ್ಯದ ಕರಾವಳಿಯ 25 ಸಾವಿರಕ್ಕೂ ಅಧಿಕ ಮಂದಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಬಹುತೇಕ ಕುಶಲ ಕಾರ್ಯಗಳಿಗಾಗಿ ಅವರಿಗೆ ಭಾರತೀಯರ ಅಗತ್ಯವಿದೆ. ಭಾರತೀಯರ ಮೇಲೆ ವಿಶ್ವಾಸವೂ ಹೆಚ್ಚಿದೆ. ಹಾಗಾಗಿ ಈ ಮಸೂದೆ ಜಾರಿಗೆ ಬರುವುದು ಕಷ್ಟ ಎಂದು ಕುವೈತ್​ನಲ್ಲಿ ವಾಸಿಸುತ್ತಿರುವ ಮಂಗಳೂರು ಮೂಲದ ಉದ್ಯಮಿ ಗೋಕುಲ್ ಭಟ್ ಹೇಳುತ್ತಾರೆ. ಈಗಿನ ಪರಿಸ್ಥಿತಿಯಿಂದಾಗಿ ಸರ್ಕಾರ ಹೊಸ ಮಸೂದೆಯ ಬಗ್ಗೆ ಯೋಚಿಸುತ್ತಿದೆಯಾದರೂ ಜಾರಿಗೊಳ್ಳಲು ಒಂದೆರಡು ವರ್ಷ ಬೇಕಾಗಲೂಬಹುದು ಎನ್ನುವುದು ಅವರ ಅಭಿಮತ.

ಭಾರತೀಯರನ್ನು ವಾಪಸ್ ಕಳಿಸಬೇಕೆಂದರೆ ಅವರಿಗೆ ನೀಡಿರುವ ನಿಗದಿತ ಅವಧಿಯ ವೀಸಾಗಳನ್ನು ರದ್ದುಗೊಳಿಸಬೇಕು. ಉದ್ಯೋಗಕ್ಕೆ ಅವಕಾಶ ನೀಡಿ, ಈಗ ದೇಶ ತೊರೆಯಿರಿ ಎನ್ನುವುದು ಮಾನವ ಹಕ್ಕುಗಳ ಉಲ್ಲಂಘನೆ. ಹೀಗಾಗಿ, ಈ ರಾಜತಾಂತ್ರಿಕ ಬಿಕ್ಕಟ್ಟನ್ನು ಭಾರತ ಸರ್ಕಾರ ಕೈಗೆತ್ತಿಕೊಂಡು ಕುವೈತ್ ಜತೆ ಮಾತುಕತೆ ನಡೆಸಬೇಕು. ಕುವೈತ್​ನ ಆರ್ಥಿಕತೆಗೆ ಭಾರತೀಯರು ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಅದನ್ನೆಲ್ಲ ಅಲಕ್ಷಿಸುವುದು ಸುಲಭದ ಮಾತಲ್ಲ - ಮೋಹನ್ ಕಾತರಕಿ, ಸುಪ್ರೀಂಕೋರ್ಟ್ ವಕೀಲರು ಕುವೈತ್ ಅಥವಾ ಯಾವುದೇ ದೇಶಕ್ಕೆ ವಲಸಿಗರ ವಾಸ್ತವ್ಯ ನಿಯಂತ್ರಿಸುವ ಸಾರ್ವಭೌಮ ಅಧಿಕಾರ ಇದೆ. ಭಾರತ ಕೂಡ ತನ್ನ ಆಂತರಿಕ ಹಿತಾಸಕ್ತಿ ರಕ್ಷಿಸಲು ಪೌರತ್ವ ತಿದ್ದುಪಡಿ ಕಾನೂನು ಜಾರಿ ಮಾಡಿದ್ದನ್ನು ಸ್ಮರಿಸಬಹುದು. - ಅನಂತ ನಾರಾಯಣ ಭಟ್, ಸುಪ್ರೀಂಕೋರ್ಟ್ ವಕೀಲರು https://www.vijayavani.net/how-will-corona-pandemic-end-there-are-two-ways/