ನ್ಯೂಸ್

ಸುದ್ದಿ ಸಮಗ್ರ | ಬಾಂಗ್ಲಾದಲ್ಲಿ ಬವಣೆ

Webdesk - Ravikanth
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಪದೇಪದೆ ಹಲ್ಲೆಗಳು ನಡೆಯುತ್ತಿವೆ. ಮೂಲಭೂತವಾದಿ ಸಂಘಟನೆಗಳು ಬಲಗೊಂಡಿದ್ದು, ಕುಕೃತ್ಯಗಳು ಹೆಚ್ಚಿವೆ. ಹಿಂಸೆಯಲ್ಲಿ ತೊಡಗಿರುವ ಇಂಥ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾಗಿದೆ. ಪಾಕಿಸ್ತಾನದಂತೆಯೇ, ಬಾಂಗ್ಲಾದೇಶದಲ್ಲಿಯೂ ಅಲ್ಪಸಂಖ್ಯಾತರು ಭಯದ ನೆರಳಲ್ಲಿ ವಾಸಿಸುತ್ತಿದ್ದು, ಹಿಂದೂಗಳ ಜನಸಂಖ್ಯೆ ತೀವ್ರಪ್ರಮಾಣದಲ್ಲಿ ಕುಸಿದಿದೆ. ಈ ಕುರಿತಾದ ವಿವರ ಇಲ್ಲಿದೆ.

ಬಾಂಗ್ಲಾದೇಶದಲ್ಲಿ ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಇಸ್ಕಾನ್​ನ ರಾಧಾಕೃಷ್ಣ ಮಂದಿರದ ಮೇಲೆ ದಾಳಿ ಮಾಡಲಾಗಿದೆ. ಅಷ್ಟೇ ಅಲ್ಲ, ಹಿಂದೂಗಳ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚುವ ಕೃತ್ಯಗಳು ಆಗಾಗ ಮರುಕಳಿಸುತ್ತಲೇ ಇವೆ. ವರ್ಷದಿಂದ ವರ್ಷಕ್ಕೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅಲ್ಪಸಂಖ್ಯಾತರ ರಕ್ಷಣೆಗೆ ಬರಬೇಕಾದ ಸರ್ಕಾರ ಮೂಲಭೂತವಾದಿಗಳ ಎದುರು ಮಂಡಿಯೂರಿದೆ. ಹಿಂಸಾಚಾರದಲ್ಲಿ ಭಾಗಿಯಾಗಿರುವ ಸಂಘಟನೆಗಳ ಯಾವವು ಅಂತ ಸ್ಪಷ್ಟವಾಗಿ ಗೊತ್ತಿದ್ದರೂ, ಅವುಗಳ ವಿರುದ್ಧ ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗುತ್ತಿಲ್ಲ.

ಎಂಟು ವರ್ಷಗಳ ದುಸ್ಥಿತಿ

  • 2013-2021ರ ಎಂಟು ವರ್ಷಗಳ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಲ್ಲೆ ಪ್ರಕರಣಗಳು ಹಿಂದೆಂದಿಗಿಂತ ಹೆಚ್ಚಿವೆ. ಈ ಅವಧಿಯಲ್ಲಿ ಒಟ್ಟು 3600 ಹಲ್ಲೆ/ಮಾರಣಾಂತಿಕ ದಾಳಿ ಪ್ರಕರಣಗಳು ಸಂಭವಿಸಿವೆ. ಈ ಘಟನೆಗಳಲ್ಲಿ 11 ಹಿಂದೂಗಳು ಪ್ರಾಣ ಕಳೆದುಕೊಂಡರೆ, 862 ಜನರು ಗಾಯಗೊಂಡಿದ್ದಾರೆ (ಸ್ಥಳೀಯ ಸಂಘಟನೆಯೊಂದರ ಪ್ರಕಾರ, 2017ರ ಒಂದೇ ವರ್ಷದಲ್ಲಿ ನಡೆದ 150ಕ್ಕೂ ಹೆಚ್ಚು ಹಿಂಸಾಚಾರ ಪ್ರಕರಣಗಳಲ್ಲಿ 105 ಹಿಂದೂಗಳು ಪ್ರಾಣ ಕಳೆದುಕೊಂಡಿದ್ದಾರೆ).
  • ಸರ್ಕಾರದ ಅಂಕಿಅಂಶಗಳ ಪ್ರಕಾರವೇ, ಈ 8 ವರ್ಷದಲ್ಲಿ ಹಿಂದೂಗಳ 550 ಮನೆಗಳು ಮತ್ತು 440 ಅಂಗಡಿ/ಮಳಿಗೆಗಳನ್ನು ದಾಳಿ ಮೂಲಕ ಧ್ವಂಸ ಮಾಡಲಾಗಿದೆ.
  • ಹಿಂದೂ ಮಂದಿರಗಳ ಮೇಲೆ ದಾಳಿ, ಮೂರ್ತಿ ಭಂಜನೆಯಂಥ 1,670ಕ್ಕೂ ಹೆಚ್ಚು ಘಟನೆಗಳು ಸಂಭವಿಸಿವೆ.
  • ಬಾಂಗ್ಲಾದೇಶ ಹಿಂದೂ ಬೌದ್ಧಿಸ್ಟ್ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್​ನ ವರದಿ ಪ್ರಕಾರ ಹಿಂದೂಗಳ ಮೇಲೆ ನಡೆದ ದಾಳಿಗಳು ಸರ್ಕಾರದ ಅಂಕಿಸಂಖ್ಯೆಗಿಂತ ಹಲವು ಪಟ್ಟು ಹೆಚ್ಚು.

ನಿತ್ಯ 750 ಜನರ ಪಲಾಯನ!: ಢಾಕಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಪ್ರೊ.ಅಬ್ದುಲ್ ಬರ್ಕತ್ ಕೈಗೊಂಡಿರುವ ಅಧ್ಯಯನದಂತೆ, ಸುರಕ್ಷತೆಯ ಕೊರತೆ ಮತ್ತು ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಪ್ರತಿದಿನ ಸರಾಸರಿ 750 ಹಿಂದೂಗಳು ಬಾಂಗ್ಲಾದೇಶ ತೊರೆಯುತ್ತಿದ್ದಾರೆ ಮತ್ತು ಈ ಪೈಕಿ ಹೆಚ್ಚಿನವರು ಭಾರತಕ್ಕೆ ಬರುತ್ತಿದ್ದಾರೆ.

ಕುಸಿದ ಹಿಂದೂ ಜನಸಂಖ್ಯೆ: 1947ರಲ್ಲಿ ಭಾರತ ವಿಭಜನೆಗೊಂಡು ಪಾಕಿಸ್ತಾನ ಅಸ್ತಿತ್ವಕ್ಕೆ ಬಂತು. ಆಗ ಪೂರ್ವ ಪಾಕಿಸ್ತಾನದಲ್ಲಿದ್ದ (ಈ ಪ್ರದೇಶವೇ 1971ರಲ್ಲಿ ಬಾಂಗ್ಲಾದೇಶವಾಯಿತು) ಹಿಂದೂಗಳ ಜನಸಂಖ್ಯೆ ಶೇಕಡ 30ರಷ್ಟು. ಬಾಂಗ್ಲಾದೇಶ ಸರ್ಕಾರದ ಅಂಕಿಅಂಶಗಳ ಪ್ರಕಾರ 1980ರ ದಶಕದಲ್ಲಿ ಹಿಂದೂಗಳ ಜನಸಂಖ್ಯೆ ಶೇಕಡ 13.5 ಇತ್ತು. 2011ರ ಜನಗಣತಿ ವರದಿಯ ಪ್ರಕಾರ 16.5 ಕೋಟಿ ಜನಸಂಖ್ಯೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಖ್ಯೆ ಕೇವಲ ಶೇ.8.5. ಅಂದರೆ, ನಾಲ್ಕೇ ದಶಕಗಳಲ್ಲಿ ಶೇ.5ರಷ್ಟು ಕಡಿಮೆಯಾಯಿತು. 2011ರ ಜನಗಣತಿ ವರದಿ ಪ್ರಕಾರ ಒಂದೇ ದಶಕದಲ್ಲಿ ಹಿಂದೂಗಳ ಸಂಖ್ಯೆ 10 ಲಕ್ಷದಷ್ಟು ಕಡಿಮೆಯಾಯಿತು. ಶೇ.90ಕ್ಕಿಂತ ಹೆಚ್ಚು ಸಂಖ್ಯೆ ಮುಸ್ಲಿಂರದ್ದು. ಬೌದ್ಧರು ಶೇ.0.6, ಕ್ರೖೆಸ್ತರ ಸಂಖ್ಯೆ ಶೇ.0.4ರಷ್ಟಿದೆ. ಇಲ್ಲಿ ಹಿಂದೂಗಳು ಮತ್ತು ಮುಸ್ಲಿಂರ ಭಾಷೆ ಬಂಗಾಳಿಯೇ. ಸಾಂಸ್ಕೃತಿಕವಾಗಿಯೂ ಬಹುತೇಕ ಸಮಾನ ಸಂಗತಿಗಳಿವೆ. ಆದರೆ, ಧರ್ಮ ಬೇರೆ ಎಂಬ ಒಂದೇ ಕಾರಣಕ್ಕೆ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ.

ಹಿಂಸೆ ಹರಡಲು ಹೊಸ ಪ್ಯಾಟರ್ನ್: ಇತ್ತೀಚಿನ ವರ್ಷಗಳಲ್ಲಿ ದಾಳಿಗೆ ಹೊಸ ಕುತಂತ್ರ ಹೆಣೆಯಲಾಗಿದೆ. ಮೊದಲಿಗೆ, ‘ಇಸ್ಲಾಂಗೆ ಅವಮಾನ ಮಾಡಲಾಗಿದೆ’ ಎಂದು ಸಾಮಾಜಿಕ ಮಾಧ್ಯಮಗಳ ಮುಖೇನ ವದಂತಿ ಹಬ್ಬಿಸಲಾಗುತ್ತದೆ. ಎರಡನೇ ಹಂತದಲ್ಲಿ ಮೂಲಭೂತವಾದಿಗಳು, ಹಿಂದೂಗಳು ವಾಸಿಸುವ ಕ್ಷೇತ್ರಗಳನ್ನು ಗುರುತಿಸಿ, ದಾಳಿ ಮಾಡುತ್ತಾರೆ, ಅವರ ಆಸ್ತಿಪಾಸ್ತಿಗಳನ್ನು ನಾಶಮಾಡುತ್ತಾರೆ. ಹೀಗೆ ಹಿಂಸೆಯ ದಳ್ಳುರಿಗೆ ಸಾವಿರಾರು ಹಿಂದೂಗಳು ಮನೆ, ಇತರ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಚುನಾವಣೆ ಸಮೀಪಿಸಿದಾಗಲಂತೂ ದಾಳಿಗಳು ಇನ್ನಷ್ಟು ಹೆಚ್ಚುತ್ತವೆ. ‘ಆಡಳಿತಾರೂಢ ಆವಾಮಿ ಲೀಗ್ ಮತ್ತು ಜಮಾತ್-ಎ-ಇಸ್ಲಾಂ ತಮ್ಮ ಸ್ವಾರ್ಥಕ್ಕಾಗಿ ಕಳೆದ ಒಂದು ದಶಕದಿಂದ ಎರಡೂ ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡುತ್ತಿವೆ. ಪ್ರಧಾನಿ ಶೇಖ್ ಹಸೀನಾ ಹಿಂದೂಗಳ ಮೇಲಿನ ದಾಳಿಗೆ ಮೂಲಭೂತವಾದಿಗಳನ್ನು ಹೊಣೆಯಾಗಿಸುತ್ತಾರೆ ವಿನಾ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎನ್ನುತ್ತಾರೆ ಬಾಂಗ್ಲಾದೇಶದ ರಾಜಕೀಯ ವಿಶ್ಲೇಷಕರು.

ಹಿಂದೂಗಳ ಮೇಲಿನ ಹಲ್ಲೆಗೆ ಪ್ರಮುಖ ಕಾರಣಗಳು

  • ಬಾಂಗ್ಲಾದೇಶದ ಪ್ರಮುಖ ಧರ್ಮ ಇಸ್ಲಾಂ. ಹಿಂದೂಗಳ ಧಾರ್ವಿುಕ ಸ್ವಾತಂತ್ರ್ಯದ ಬಗ್ಗೆ ಅಲ್ಲಿನ ಸರ್ಕಾರ ಮಾತನಾಡುವುದಿಲ್ಲ. ಹಾಗಾಗಿ, ಮೂಲಭೂತವಾದ ಬೆಳೆಯುತ್ತಿದ್ದು, ಹಿಂದೂಗಳು ಧಾರ್ವಿುಕ ಸ್ವಾತಂತ್ರ್ಯದಿಂದ ಸಂಪೂರ್ಣ ವಂಚಿತರಾಗಿದ್ದಾರೆ.
  • ರಾಜಕೀಯ ಪಕ್ಷಗಳು ಮತಗಳ ಧ್ರುವೀಕರಣಕ್ಕಾಗಿ ಇಂಥ ಕೃತ್ಯಗಳನ್ನು ಬೆಂಬಲಿಸುತ್ತವೆ ಅಥವಾ ಅವುಗಳೇ ಹಿಂದೆ ನಿಂತು ಮಾಡಿಸುತ್ತವೆ.
  • ಪ್ರಧಾನಿ ಶೇಖ್ ಹಸೀನಾ ‘ಭಾರತದ ಸ್ನೇಹಿತೆ’ ಎಂದು ಮೇಲ್ನೋಟಕ್ಕೆ ತೋರಿಸಿಕೊಂಡರೂ, ಮೂಲಭೂತವಾದವನ್ನು ಪೋಷಿಸುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲಿನ ದಾಳಿ ಪ್ರಕರಣಗಳು ಹೆಚ್ಚಿರುವುದಕ್ಕೆ ಅಂಕಿ-ಸಂಖ್ಯೆಗಳೇ ಸಾಕ್ಷಿ. ಮುಸ್ಲಿಂ ಮತಗಳು ಕೈತಪ್ಪಬಹುದೆಂಬ ಆತಂಕದಲ್ಲಿ ಅವರು ಇಂಥ ಕೃತ್ಯಗಳನ್ನು ಖಂಡಿಸುವ ಗೋಜಿಗೂ ಹೋಗುವುದಿಲ್ಲ.
  • ಜಮಾತ್-ಎ-ಇಸ್ಲಾಂ ಮೂಲಭೂತವಾದವನ್ನು ಹರಡುತ್ತಿದ್ದು, ಹಿಂದೂಗಳ ಮೇಲಿನ ಹಲ್ಲೆ ಪ್ರಕರಣಗಳ ಮಾಸ್ಟರ್ ಮೈಂಡ್ ಆಗಿದೆ.
  • ಹಿಂದೂಗಳ ಜನಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಅವರು ಹೊಂದಿರುವ ಕೃಷಿಭೂಮಿ, ಇತರ ಆಸ್ತಿಗಳನ್ನು ಕಬಳಿಸಲಾಗುತ್ತಿದೆ ಇಲ್ಲವೆ ಹಿಂಸೆಯ ಮೂಲಕ ಕಿತ್ತುಕೊಳ್ಳಲಾಗುತ್ತಿದೆ.

ಆ ನೋವು ಮರೆಯಲು ಸಾಧ್ಯವಿಲ್ಲ: 2021ರ ಅಕ್ಟೋಬರ್ 13ರಂದು ದುರ್ಗಾ ಪೂಜೆಯ ಸಂದರ್ಭದಲ್ಲಿ ಕುರಾನ್​ಗೆ ಅವಮಾನ ಮಾಡಲಾಗಿದೆ ಎಂದು ಮೂಲಭೂತವಾದಿಗಳು ಸುಳ್ಳುಸುದ್ದಿ ಹಬ್ಬಿಸಿದ ಪರಿಣಾಮ ದೇಶದ ಅನೇಕ ಕಡೆಗಳಲ್ಲಿ ಹಿಂದೂಗಳ ಮೇಲೆ ಮತ್ತು ಅವರ ಆಸ್ತಿಪಾಸ್ತಿಗಳ ಮೇಲೆ ದಾಳಿಗಳು ನಡೆದವು. ಅಷ್ಟೇ ಅಲ್ಲ, ನೂರಾರು ದೇಗುಲಗಳನ್ನು ಧ್ವಂಸ ಮಾಡಲಾಯಿತು. ಈ ಹಿಂಸಾಚಾರದಲ್ಲಿ 6 ಜನರು ಮೃತಪಟ್ಟರು ಮತ್ತು ನೂರಾರು ಜನ ಗಾಯಗೊಂಡರು. ಒಂದು ಬೌದ್ಧ ಮಠಕ್ಕೂ ಬೆಂಕಿ ಹಚ್ಚಲಾಯಿತು. ಮೋದಿ ಭೇಟಿಗೆ ವಿರೋಧ: 2021ರ ಮಾರ್ಚ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡುವುದನ್ನು ಮೂಲಭೂತವಾದಿಗಳು ವಿರೋಧಿಸಿ, ಭಾರಿ ಪ್ರತಿಭಟನೆ ನಡೆಸಿದ್ದರು. ಈ ವಿರೋಧ ಹಿಂಸಾತ್ಮಕ ರೂಪ ತಳೆದ ಪರಿಣಾಮ 12 ಜನರು ಪ್ರಾಣ ಕಳೆದುಕೊಂಡರು.

ಮತ್ತೆ ಮತ್ತೆ ದಾಳಿ

  • ಚಟಗಾಂವ್​ನಲ್ಲಿ ಇಸ್ಕಾನ್ ನಡೆಸುತ್ತಿದ್ದ ಅನಾಥಾಲಯದ ಮೇಲೆ 2009ರಲ್ಲಿ ದಾಳಿ. ಅನಾಥಾಲಯದಲ್ಲಿನ ಪೀಠೋಪಕರಣ ಹಾಗೂ ಮೂರ್ತಿಗಳನ್ನು ಧ್ವಂಸಗೊಳಿಸಲಾಯಿತು. ಭಕ್ತರನ್ನು ಮನಬಂದಂತೆ ಥಳಿಸಲಾಯಿತು.
  • ದಿನಾಜಪುರ್​ದ ಇಸ್ಕಾನ್ ದೇಗುಲದ ಮೇಲೆ 2015ರಲ್ಲಿ ಜಮಾತ್-ಉಲ್-ಮುಜಾಹಿದ್ದಿನ್ ಭಯೋತ್ಪಾದಕರಿಂದ ದಾಳಿ. ಗುಂಡಿನ ದಾಳಿಯಲ್ಲಿ ಇಬ್ಬರು ಭಕ್ತರಿಗೆ ಗಾಯ.
  • ಸಿಲ್​ಹಟ್​ನ ಇಸ್ಕಾನ್ ಮಂದಿರದ ಮೇಲೆ ಮೂಲಭೂತವಾದಿಗಳು 2016ರಲ್ಲಿ ನಡೆಸಿದ ದಾಳಿಯಲ್ಲಿ 10 ಜನರಿಗೆ ಗಾಯ.
  • ಢಾಕಾದ ಇಸ್ಕಾನ್ ಮಂದಿರ ಆಯೋಜಿಸಿದ್ದ ರಥೋತ್ಸವದ ಮೇಲೆ 2018ರಲ್ಲಿ ದಾಳಿ, 6 ಭಕ್ತರಿಗೆ ಗಾಯ.
  • ಢಾಕಾದ ಇಸ್ಕಾನ್ ಮಂದಿರದ ಮೇಲೆ ಅಂಸಾರ್-ಅಲ್-ಇಸ್ಲಾಂನ ಭಯೋತ್ಪಾದಕ ದಾಳಿಯ ಸಂಚನ್ನು (2020) ವಿಫಲಗೊಳಿಸಿದ ಪೊಲೀಸರು.
  • ನೌಖಾಲಿಯ ಇಸ್ಕಾನ್ ಮಂದಿರದ ಮೇಲೆ 2021ರ ದುರ್ಗಾ ನವಮಿಯಂದೇ (ಅಕ್ಟೋಬರ್ 15) ದಾಳಿ. ಮಂದಿರದ ಒಬ್ಬ ಯತಿ ಮತ್ತು ಓರ್ವ ಭಕ್ತನ ಸಾವು.
  • ಢಾಕಾದ ಇಸ್ಕಾನ್ (ರಾಧಾಕಾಂತ) ಮಂದಿರದ ಮೇಲೆ 2022 ಮಾರ್ಚ್ 17ರಂದು ದಾಳಿ. ಮೂವರು ಭಕ್ತರಿಗೆ ಗಾಯ.

(ಮಾಹಿತಿ: ain o salish kendra (ask))