ಭದ್ರಾವತಿ: ತಾಲೂಕಿನಲ್ಲಿ ಭಾನುವಾರ ಇಡೀ ದಿನ ಜಿಟಿಜಿಟಿ ಮಳೆಯಾಗಿದ್ದರಿಂದ ಜನರ ಸಂಚಾರ ವಿರಳವಾಗಿತ್ತು. ಸಂತೆ ದಿನವಾಗಿದ್ದು, ಸುರಿಯುತ್ತಿರುವ ಮಳೆಯಲ್ಲೇ ತರಕಾರಿ, ಹಣ್ಣು, ದಿನಸಿ ಪದಾರ್ಥಗಳನ್ನು ಖರೀದಿಸಿದರು. ಆದರೆ ಎಂದಿನಂತೆ ವಹಿವಾಟು ಜೋರಾಗಿರಲಿಲ್ಲ.
ಹವಾಮಾನ ಇಲಾಖೆ ನೀಡಿದ ಮಾಹಿತಿ ಮೇರೆಗೆ ಒಂದೆರಡು ದಿನಗಳ ಕಾಲ ಭತ್ತ ಕಟಾವು ಮಾಡದಿರುವಂತೆ ಕೃಷಿ ಇಲಾಖೆ ಮಾಹಿತಿ ನೀಡಿತ್ತು. ಆದರೂ ಕೆಲವರು ಭತ್ತ ಕಟಾವು ಮಾಡಿದ್ದರು. ಇದೀಗ ಆ ರೈತರು ಭತ್ತವನ್ನು ರಸ್ತೆಯಲ್ಲೇ ಗುಡ್ಡೆ ಹಾಕಿಕೊಂಡು ಖರೀದಿದಾರರ ಆಗಮನಕ್ಕೆ ಕಾಯುತ್ತಿದ್ದಾರೆ. ಒಂದು ಕ್ವಿಂಟಾಲ್‌ಗೆ 2,450 ರೂ. ಇತ್ತು. ಇದೀಗ ಮಳೆ ಬಂದಿದ್ದರಿಂದ ತೇವಾಂಶದ ನೆಪ ಹೇಳಿ 2,200 ರೂ.ಗೆ ಕೇಳುತ್ತಿದ್ದಾರೆ. ಹಾಗಾಗಿ ಭತ್ತ ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಯಂತ್ರಗಳಿಂದ ಕಟಾವು ಮಾಡಿದ ಭತ್ತದ ಹುಲ್ಲು ಸಂಪೂರ್ಣ ನೆನೆದಿದೆ. ಕೆಲವರು ಪೆಂಡಿ ಕಟ್ಟಿದರೂ ಗದ್ದೆಯಲ್ಲೇ ಬಿಟ್ಟಿದ್ದಾರೆ. ಮಳೆ ನಿರಂತರವಾಗಿ ಸುರಿದರೆ ಭತ್ತ ಉದುರುವ ಸಾಧ್ಯತೆಯಿದೆ.