ಬೈಲಕುಪ್ಪೆ ಪೆಟ್ರೋಲ್ ಬಂಕ್ ಸಮೀಪ ತ್ಯಾಜ್ಯ ರಾಶಿಗೆ ಬೆಂಕಿ ಹಚ್ಚಿರುವುದು.  
ನ್ಯೂಸ್

ಸುಟ್ಟ ಪ್ಲಾಸ್ಟಿಕ್ ತ್ಯಾಜ್ಯದ ಹೊಗೆಯಿಂದ ಸಮಸ್ಯೆ

ಶಿವಶಂಕರ್ ಎಂ. ಹೆಬ್ಬಳ್ಳ

ಬೈಲಕುಪ್ಪೆ : ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸುಡುತ್ತಿರುವ ಹಿನ್ನೆಲೆಯಲ್ಲಿ ಇದರಿಂದ ಬರುತ್ತಿರುವ ದುರ್ವಾಸನೆಯಿಂದಾಗಿ ಸಾರ್ವಜನಿಕರಿಗೆ ತುಂಬ ತೊಂದರೆಯಾಗಿದ್ದು. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೈಲಕುಪ್ಪೆ ಪೆಟ್ರೋಲ್ ಬಂಕ್ ಸಮೀಪ ಟಿಬೆಟಿಯನ್ನರು ಇರುವ ಎಲ್ಲ ಕ್ಯಾಂಪ್‌ಗಳಿಂದ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯ, ಕಸವನ್ನು ತಂದು ಸುರಿದು, ಗ್ರೇಡ್ ಮಾಡಿ ಅನವಶ್ಯಕ ತ್ಯಾಜ್ಯವನ್ನು ಗುಂಡಿಗೆ ಹಾಕಿ ವಾರಕ್ಕೆರಡು ಬಾರಿ ಸುಡುತ್ತಿರುವುದರಿಂದ ಗ್ರಾಮದ ಸುತ್ತ ಹೊಗೆ ಉಂಟಾಗಿ ಸಾರ್ವಜನಿಕರಿಗೆ ತುಂಬ ಸಮಸ್ಯೆಯಾಗಿದೆ.

ರಾತ್ರಿ ಮನೆಯಿಂದ ಜನರು ಹೊರಬಂದರೆ ದುರ್ವಾಸನೆಯಿಂದ ಕೂಡಿದ ವಾತಾವರಣದಲ್ಲಿ ನಿಲ್ಲಲೂ ಆಗದೆ, ಮನೆಯೊಳಗೆ ಇರಲೂ ಆಗದೆ ಪರದಾಡುವಂತಾಗಿದೆ. ಹಲವು ದಿನಗಳಿಂದ ಬೇಸಿಗೆ ಬೇಗೆ ಹೆಚ್ಚಿದ್ದು, ರಾತ್ರಿ ವೇಳೆ ಸೆಕೆಯಿಂದ ಕಿಟಕಿ ತೆರೆದರೆ ಹೊಗೆ ಹಾಗೂ ದುರ್ವಾಸನೆ ಮನೆಯೊಳಗೆಲ್ಲ ಹರಡಿ ಪ್ರಯಾಸ ಪಡುವಂತಾಗಿದೆ.

ಇಲ್ಲಿನ ಕೂಪ್ರಟೀವಿ ಸೊಸೈಟಿ ಎಂಬ ಸಂಸ್ಥೆ ತ್ಯಾಜ್ಯ ಸಂಗ್ರಹ ಟೆಂಡರ್ ಅನ್ನು ಪಡೆದಿದ್ದು, ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಜನ ಹಿಡಿಶಾಪ ಹಾಕುವಂತಾಗಿದೆ. ಟಿಬೆಟಿಯನ್ನರ ಎಲ್ಲ ಕ್ಯಾಂಪ್‌ಗಳ ಕಸವನ್ನು ಬೈಲಕುಪ್ಪೆ ಗ್ರಾಮದ ಮಧ್ಯೆ ತಂದು ವಿಲೇವಾರಿ ಮಾಡಿ ಉಳಿದ ಕಸಕ್ಕೆ ಬೆಂಕಿ ಇಡುವುದರಿಂದ ಗ್ರಾಮದ ಪರಿಸರ ಹಾಳಾಗುವುದಲ್ಲದೇ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಇನ್ನಾದರೂ ಬೈಲಕುಪ್ಪೆ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದರು.